ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ 138ನೇ ಸಂಸ್ಥಾಪನಾ ದಿನ: 18 ರಿಂದ 'ದೇಶಕ್ಕಾಗಿ ದೇಣಿಗೆ' ಅಭಿಯಾನ

ಡಿಸೆಂಬರ್​ 28 ರಂದು ಕಾಂಗ್ರೆಸ್​ ಪಕ್ಷದ 138ನೇ ಸಂಸ್ಥಾಪನಾ ದಿನ. ಇದರ ಸ್ಮರಣಾರ್ಥ ಪಕ್ಷ ದೇಶಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ನಡೆಸಲಿದೆ.

ಕಾಂಗ್ರೆಸ್​ ಧನಸಂಗ್ರಹ ಅಭಿಯಾನ
ಕಾಂಗ್ರೆಸ್​ ಧನಸಂಗ್ರಹ ಅಭಿಯಾನ

By ETV Bharat Karnataka Team

Published : Dec 16, 2023, 3:31 PM IST

Updated : Dec 16, 2023, 5:26 PM IST

ನವದೆಹಲಿ:ಕಾಂಗ್ರೆಸ್​ ಪಕ್ಷದ 138ನೇ ಸಂಸ್ಥಾಪನಾ ದಿನದ ನಿಮಿತ್ತ ಲೋಕಸಭೆ ಚುನಾವಣೆ ಹೊತ್ತಿಗೆ ಪಕ್ಷದ ಆರ್ಥಿಕ ಸ್ಥಿತಿ ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ ಡಿಸೆಂಬರ್​ 18 ರಿಂದ ರಾಷ್ಟ್ರವ್ಯಾಪಿ 'ದೇಣಿಗೆ ಸಂಗ್ರಹ ಅಭಿಯಾನ' ಆರಂಭಿಸಲಿದೆ. 'ದೇಶಕ್ಕಾಗಿ ದೇಣಿಗೆ' ಹೆಸರಿನ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಖಜಾಂಚಿ ಅಜಯ್ ಮಾಕನ್ ಅವರು, 1920-21ರಲ್ಲಿ ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧಿ ಅವರು 'ತಿಲಕ್ ಸ್ವರಾಜ್ ನಿಧಿ' ಸಂಗ್ರಹಣೆ ಅಭಿಯಾನ ನಡೆಸಿದಂತೆ, ಪಕ್ಷದ ಆರ್ಥಿಕ ಸಬಲೀಕರಣಕ್ಕಾಗಿ ದೇಶಾದ್ಯಂತ ಜನರಿಂದ ಧನ ಸಂಗ್ರಹ ನಡೆಸಲಾಗುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಕನಿಷ್ಠ 138 ರೂಪಾಯಿಯಿಂದ ಗರಿಷ್ಠ 13,800 ವರೆಗೆ ಹಣದ ಸಹಾಯ ಮಾಡಬಹುದು ಎಂದು ಅವರು ಹೇಳಿದರು.

ಅಭಿಯಾನವು 'ಬಲಿಷ್ಠ ಭಾರತಕ್ಕಾಗಿ ದಾನ' ನೀಡುವುದಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 138 ನೇ ಸಂಸ್ಥಾಪನಾ ದಿನದ ಹಿನ್ನೆಲೆ ನಡೆಸಲಾಗುವುದು. ಹೀಗಾಗಿ 138 ರಿಂದ 13,800 ದೇಣಿಗೆ ನೀಡಲು ಕೋರಲಾಗಿದೆ. ಇದು ಉತ್ತಮ ಭಾರತಕ್ಕಾಗಿ ಪಕ್ಷದ ನಿರಂತರ ಬದ್ಧತೆ ಸಂಕೇತಿಸುತ್ತದೆ ಎಂದು ವೇಣುಗೋಪಾಲ್ ಹೇಳಿದರು.

ದೇಣಿಗೆಗಾಗಿ ಆನ್​ಲೈನ್​ ಪೋರ್ಟಲ್​​:ದೇಣಿಗೆ ಸಂಗ್ರಹಕ್ಕಾಗಿ ಪ್ರತಿ ಮನೆಗಳಿಗೆ ಪಕ್ಷದ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಅವರಿಗೆ ನೇರವಾಗಿ ಹಣ ನೀಡಬಹುದು ಅಥವಾ ಆನ್​ಲೈನ್​ ಮೂಲಕವೂ ನೆರವು ನೀಡಲು donateinc.in ಪೋರ್ಟಲ್ ಮತ್ತು inc.in ನಲ್ಲಿ ವೆಬ್​ಸೈಟ್​ ಆರಂಭಿಸಲಾಗುವುದು. ಡಿಸೆಂಬರ್ 18 ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಅಂದೇ ದೇಣಿಗೆ ಲಿಂಕ್ ಕೂಡ ಲಭ್ಯವಾಗಲಿದೆ ಎಂದು ತಿಳಿಸಿದರು.

ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಪತ್ರಿಕಾಗೋಷ್ಠಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನದ ಬಗ್ಗೆ ಪ್ರಚುರ ಮಾಡಲಿದ್ದಾರೆ. ಪಕ್ಷದ ಸಂಸ್ಥಾಪನಾ ದಿನವಾದ ಡಿಸೆಂಬರ್ 28 ರವರೆಗೆ ಆನ್‌ಲೈನ್‌ ಅಭಿಯಾನ ನಡೆಸಲಾಗುತ್ತದೆ. ನಂತರ ಸ್ವಯಂ ಸೇವಕರು ಮನೆ -ಮನೆಗೆ ಭೇಟಿ ನೀಡಲಿದ್ದಾರೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 10 ಮನೆಗಳಿಂದ ಕನಿಷ್ಠ 138 ರೂಪಾಯಿ ಸಂಗ್ರಹ ಮಾಡಲಿದ್ದಾರೆ. ರಾಜ್ಯ ಮಟ್ಟದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಮತ್ತು ಎಐಸಿಸಿ ಪದಾಧಿಕಾರಿಗಳು ತಲಾ 1,380 ರೂಪಾಯಿ ಸಂಗ್ರಹಣೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಾಗ್ಪುರದಲ್ಲಿ ಬೃಹತ್​ ರ‍್ಯಾಲಿ:ಈ ಅಭಿಯಾನವು ಉತ್ತಮ ಭಾರತದ ದೂರದೃಷ್ಟಿ ಹೊಂದಿದೆ. ಯಾವುದೇ ರಾಜಕೀಯ ಪಕ್ಷದಿಂದ ನಡೆಸಿದ ಅತಿ ದೊಡ್ಡ ಅಭಿಯಾನ ಇದಾಗಲಿದೆ. ಪಕ್ಷದ 138 ನೇ ಸಂಸ್ಥಾಪನಾ ದಿನವನ್ನು ಡಿಸೆಂಬರ್ 28 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಸಲಾಗುವುದು. ಅಲ್ಲಿ ನಡೆಯುವ ಬೃಹತ್ ರ‍್ಯಾಲಿಯಲ್ಲಿ 10 ಲಕ್ಷ ಜನ ಸೇರಲಿದ್ದಾರೆ. ದೇಣಿಗೆ ನೀಡಲು ಸಿದ್ಧರಿರುವ ಯಾರಾದರೂ ಭಾರತೀಯ ಪ್ರಜೆಯಾಗಿರಬೇಕು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ:ನಾಳೆ ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ 'ಸೂರತ್ ಡೈಮಂಡ್ ಬೋರ್ಸ್' ಪ್ರಧಾನಿ ಮೋದಿಯಿಂದ ಉದ್ಘಾಟನೆ

Last Updated : Dec 16, 2023, 5:26 PM IST

ABOUT THE AUTHOR

...view details