ಚಂಡೀಗಢ (ಪಂಜಾಬ್):ಪಂಜಾಬ್‌ನ ಪಟಿಯಾಲ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಿ ಅಖಿತ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಶುಕ್ರವಾರ ಆದೇಶಿಸಿದೆ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ನಿಯಾಗಿರುವ ಪ್ರಣೀತ್ ಕೌರ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮತ್ತು ಬಿಜೆಪಿಗೆ ಸಹಾಯ ಮಾಡಿದ ಆರೋಪ ಹೊರಿಸಲಾಗಿದೆ.
ಕಳೆದ ವರ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪುತ್ರ ರಣೀಂದರ್ ಸಿಂಗ್, ಪುತ್ರಿ ಜೈ ಇಂದರ್ ಕೌರ್ ಮತ್ತು ಮೊಮ್ಮಗ ನಿರ್ವಾನ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಂದಿನಿಂದ ಪ್ರಣೀತ್ ಕೌರ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ, ಕಾಂಗ್ರೆಸ್ ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಪ್ರಣೀತ್ ಕೌರ್ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಎಐಸಿಸಿಗೆ ದೂರು ಸಲ್ಲಿಸಿದ್ದರು.
ಪ್ರಣೀತ್ ಕೌರ್ ಬಿಜೆಪಿಗೆ ಸಹಾಯ ಮಾಡಲು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ ಪಿಸಿಸಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ದೂರು ನೀಡಿದ್ದಾರೆ. ಜೊತೆಗೆ ಪಂಜಾಬ್‌ನ ಇತರೆ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ದೂರನ್ನು ಅಗತ್ಯ ಕ್ರಮಕ್ಕಾಗಿ ಎಐಸಿಸಿ ಶಿಸ್ತು ಕ್ರಮ ಸಮಿತಿಗೆ ವಹಿಸಲಾಗಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಐಸಿಸಿ ಶಿಸ್ತು ಕ್ರಮ ಸಮಿತಿಯು ಇದನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ. ಪಟಿಯಾಲದ ಸಂಸದೆ ಪ್ರಣೀತ್ ಕೌರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಬೇಕೆಂದು ನಿರ್ಧರಿಸಿದೆ. ಅಲ್ಲದೇ, ಅವರನ್ನು ಪಕ್ಷದಿಂದ ಯಾಕೆ ಉಚ್ಚಾಟನೆ ಮಾಡಬಾರದು ಎಂದು ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ತಾರಿಕ್ ಅನ್ವರ್ ಹೇಳಿದ್ದಾರೆ.
ಪ್ರಣೀತ್ ಕೌರ್ ಅವರನ್ನು ಕಾಂಗ್ರೆಸ್ನಿಂದ ಉಚ್ಚಾಟಿಸಬೇಕೆಂದು ಹಿರಿಯ ನಾಯಕರಾದ ಸುಖಜೀಂದರ್ ಸಿಂಗ್ ರಾಂಧವಾ, ಪ್ರತಾಪ್ ಸಿಂಗ್ ಬಾಜ್ವಾ ಮತ್ತಿತರರು ಒತ್ತಾಯಿಸಿದ್ದಾರೆ. ಪ್ರಣೀತ್ ಕೌರ್ ಕಾಂಗ್ರೆಸ್‌ನ ಭಾಗವೇ ಅಲ್ಲ. ಎಂದಿಗೂ ಪಕ್ಷದಲ್ಲಿ ಇರಲೂ ಸಾಧ್ಯವಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಹಾಗೂ ಲೋಕಸಭೆ ಸದಸ್ಯತ್ವ ರದ್ದಾಗುವ ಭೀತಿಯಿಂದ ಪ್ರಣೀತ್ ಕೌರ್ ಪಕ್ಷ ಬಿಡುತ್ತಿಲ್ಲ. ಆದರೆ, ಪ್ರಣೀತ್ ಕಾಂಗ್ರೆಸ್ನಲ್ಲಿದ್ದಾರೆ ಎಂದು ಜನತೆ ಕೂಡ ಭಾವಿಸಕೂಡದು. ಪ್ರಣೀತ್ ಕೌರ್ ಅವರಿಗೆ ಆತ್ಮಗೌರವವಿದ್ದರೆ ಅವರೇ ಕಾಂಗ್ರೆಸ್ ತೊರೆಯಲಿ ಎಂದು ಪ್ರತಾಪ್ ಸಿಂಗ್ ಬಾಜ್ವಾ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಪ್ರಣೀತ್ ಕೌರ್ 1999, 2004, 2009ರ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದ್ದರು. ಅಲ್ಲದೇ, 2009ರಿಂದ 2012ರವರೆಗೆ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2014ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರು, 2019ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಗೆದ್ದಿದ್ದರು.
ಇದನ್ನೂ ಓದಿ:ಸಚಿನ್ ಪೈಲಟ್ ಬೆಂಬಲಿಗ ಸಚಿವ ರಾಜೇಂದ್ರ ಸಿಂಗ್ ಗೂಢಾ ವಿರುದ್ಧ ಕಿಡ್ನಾಪ್ ಕೇಸ್