ನವದೆಹಲಿ:ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ವಿರೋಧಿಸಿರುವ ನಮ್ಮ ಹೇಳಿಕೆಗೆ ಬದ್ಧವಾಗಿದ್ದೇವೆ. ಮುಂದೆ ಅದರ ಕರಡು ಅಥವಾ ವರದಿಗಳು ಬಂದ ಮೇಲೆ ಆ ಬಗ್ಗೆ ಹೇಳಿಕೆ ನೀಡಲಾಗುವುದು. ಮುಂಗಾರು ಅಧಿವೇಶನದಲ್ಲಿ ಅನಪೇಕ್ಷಿತ ಕಾಯ್ದೆಗಳ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಜುಲೈ 20ರಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿವಿಧ ವಿಷಯಗಳ ಮೇಲೆ ಪಕ್ಷದ ಉನ್ನತ ನಾಯಕತ್ವವು ಸಭೆ ನಡೆಸಿದೆ. ಸಂಸದೀಯ ಕಾರ್ಯತಂತ್ರದ ಬಗ್ಗೆ ಚರ್ಚಿಸುವುದು ಸಭೆಯ ಉದ್ದೇಶವಾಗಿತ್ತು. ಮಣಿಪುರ ಹಿಂಸಾಚಾರ, ಕುಸ್ತಿಪಟುಗಳ ಪ್ರತಿಭಟನೆ, ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ವಿವಿಧ ರಾಜ್ಯಪಾಲರು- ಬಿಜೆಪಿಯೇತರ ರಾಜ್ಯಗಳಲ್ಲಿ ಸರ್ಕಾರದ ಜೊತೆಗಿನ ಸಂಬಂಧಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ವೈಫಲ್ಯ ಮರೆಮಾಚಲು ಯತ್ನ:ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಯುಸಿಸಿ ಬಗ್ಗೆ ಪಕ್ಷ ಈಗಾಗಲೇ ತನ್ನ ನಿಲುವು ಪ್ರಕಟಿಸಿದೆ. ಉದ್ದೇಶಿತ ಕಾಯ್ದೆಯ ಬಗ್ಗೆ ಆಕ್ಷೇಪವಿದೆ. ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕರಡು ಪ್ರಸ್ತಾಪವಾಗಿ ಚರ್ಚೆಗಳು ನಡೆದಾಗ ಅದರಲ್ಲಿ ಭಾಗವಹಿಸಲಾಗುವುದು. ಕಾನೂನು ಆಯೋಗ ಯುಸಿಸಿ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಅದು ಬಿಟ್ಟು ಈ ಬಗ್ಗೆ ಯಾವುದೇ ಮಹತ್ತರ ಬದಲಾವಣೆಗಳು ಸಂಭವಿಸಿಲ್ಲ. ಹೀಗಾಗಿ ಹೊಸದಾದ ಯಾವುದೇ ಹೇಳಿಕೆಯನ್ನು ಪಕ್ಷ ನೀಡುತ್ತಿಲ್ಲ ಎಂದು ಸಮರ್ಥಿಸಿಕೊಂಡರು.
ಯುಸಿಸಿ ಜಾರಿ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯತ್ತಿರುವ ಕಾನೂನು ಆಯೋಗದ ಪ್ರಕ್ರಿಯೆ, ಕೇಂದ್ರ ಸರ್ಕಾರದ ಅಜೆಂಡಾದ ಧ್ರುವೀಕರಣ ಮತ್ತು ಅದರ ವೈಫಲ್ಯಗಳನ್ನು ಮರೆಮಾಚಲು ನಡೆಸುತ್ತಿರುವ ಯತ್ನವಾಗಿದೆ ಎಂದು ಆರೋಪಿಸಿದರು. ಇದೇ ವೇಳೆ ದೆಹಲಿ ಸುಗ್ರೀವಾಜ್ಞೆ ವಿಷಯದ ಕುರಿತು ಆಪ್ ವಿರೋಧ ಪಕ್ಷದ ಬೆಂಬಲವನ್ನು ಕೋರುತ್ತಿದೆ. ಕಾಂಗ್ರೆಸ್ ನಿಲುವೇನು ಎಂಬ ಪ್ರಶ್ನೆಗೆ ಕಾನೂನು ಬಂದಾಗ ಈ ಬಗ್ಗೆ ನಿಲುವು ಪ್ರಕಟಿಸಲಾಗುವುದು ಎಂದು ಪಕ್ಷ ಹೇಳಿದೆ.