ಜಗದಲ್‌ಪುರ (ಛತ್ತೀಸ್ಗಢ):ಜನಸಂಖ್ಯೆಗೆ (ಅಬಾದಿ) ಅನುಗುಣವಾಗಿ ಹಕ್ಕುಗಳನ್ನು ನೀಡಬಹುದೇ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಬೇಕು ಮತ್ತು ಮುಸ್ಲಿಮರ ಹಕ್ಕುಗಳನ್ನು ಕಡಿಮೆ ಮಾಡಲು ಬಯಸುತ್ತದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ದೇಶದ ಸಂಪನ್ಮೂಲಗಳ ಮೇಲೆ ಬಡವರಿಗೆ ಮೊದಲ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದರು.
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಜಾತಿ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಪ್ರಧಾನಿ ಮೋದಿ ಅವರಿಂದ ಈ ಹೇಳಿಕೆ ಬಂದಿದೆ. ಈ ವರದಿಯು ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.63ರಷ್ಟು ಒಬಿಸಿಗಳು ಮತ್ತು ಇಬಿಸಿಗಳಿದ್ದಾರೆ ಎಂದು ಹೇಳಿದೆ. ಈ ಜಾತಿಗಣತಿಯನ್ನು ಶ್ಲಾಘಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳನ್ನು ನೀಡಲು ಜಾತಿ ಆಧಾರಿತ ಜನಗಣತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಇಂದು ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಜಗದಲ್‌ಪುರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ 'ಪರಿವರ್ತನಾ ಮಹಾಸಂಕಲ್ಪ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, "ಕಾಂಗ್ರೆಸ್ ಇತರ ದೇಶಗಳೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಭಾರತದ ವಿರುದ್ಧ ಮಾತನಾಡುವುದರಲ್ಲೇ ಆ ಪಕ್ಷ ಸಂತೋಷ ಕಾಣುತ್ತದೆ. ಹೀಗಾಗಿ ಈ ಪಕ್ಷದ ಬಗ್ಗೆ ಜನತೆ ಎಚ್ಚರವಾಗಿರಬೇಕು" ಎಂದು ಹೇಳಿದರು.
"ಈಗ ದೇಶದ ಹಳೆಯ ಪಕ್ಷವನ್ನು ಅದರ ನಾಯಕರಿಂದ ನಡೆಸಲಾಗುತ್ತಿಲ್ಲ. ದೇಶ ವಿರೋಧಿ ಶಕ್ತಿಗಳೊಂದಿಗೆ ನಂಟು ಹೊಂದಿರುವ ಕೆಲವು 'ತೆರೆಯ ಹಿಂದಿನ' ಅಂಶಗಳಿಂದ ನಡೆಸಲಾಗುತ್ತಿದೆ ಎಂದು ದೂರಿದ ಮೋದಿ, ಜನಸಂಖ್ಯೆಯು ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ನನಗೆ ಬಡವೇ ದೇಶದ ದೊಡ್ಡ ಜನಸಂಖ್ಯೆ. ಅವರೇ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿದ್ದಾರೆ. ಬಡವರ ಕಲ್ಯಾಣ ನನ್ನ ಗುರಿ" ಎಂದರು.
"ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರು ಮತ್ತು ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳುತ್ತಿದ್ದರು. ಆದರೆ, ಈಗ ಯಾರು ಎಷ್ಟು ಹಕ್ಕುಗಳ ಪಾಲನ್ನು ಹೊಂದಿದ್ದಾರೆ ಎಂಬುದನ್ನು ಆಯಾ ಜನಸಂಖ್ಯೆ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಹಾಗಾದರೆ ಕಾಂಗ್ರೆಸ್ನವರು ಮುಸ್ಲಿಮರ ಹಕ್ಕುಗಳನ್ನು ಕಡಿಮೆ ಮಾಡಲು ಬಯಸುತ್ತಾರೆಯೇ" ಎಂದು ಮೋದಿ ಪ್ರಶ್ನಿಸಿದರು.
"ಯಾರ ಜನಸಂಖ್ಯೆ ಹೆಚ್ಚು?. ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಸಾಧ್ಯವೇ" ಎಂದು ಪ್ರಶ್ನಿಸಿದ ಅವರು, "ಹಿಂದೂಗಳು ಎಲ್ಲ ಹಕ್ಕುಗಳನ್ನು ತೆಗೆದುಕೊಳ್ಳಬಹುದೇ?, ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳನ್ನು ನೀಡಲಾಗುತ್ತದೆಯೇ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಅಲ್ಪಸಂಖ್ಯಾತರನ್ನು ತೆಗೆದುಹಾಕಲು ಕಾಂಗ್ರೆಸ್ ಬಯಸುತ್ತದೆಯೇ?. ದೇಶದ ಮೇಲೆ ಕಾಂಗ್ರೆಸ್ನವರ ಪ್ರೀತಿ ಕಡಿಮೆಯಾಗಿದೆ ಎಂದು ತೋರುತ್ತದೆ. ಕಾಂಗ್ರೆಸ್ 'ಲೋಕತಂತ್ರ'ವನ್ನು 'ಲೂಟಿತಂತ್ರ'ವನ್ನಾಗಿ (ಭ್ರಷ್ಟಾಚಾರ) ಹಾಗೂ 'ಪ್ರಜಾತಂತ್ರ'ವನ್ನು 'ಪರಿವಾರತಂತ್ರ'ವರನ್ನಾಗಿ ಪರಿವರ್ತಿಸುತ್ತಿದೆ ಎಂದು ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:'ಎನ್ಡಿಎ ಕೂಟ ಸೇರಲು ಕೇಳಿದ್ದ ಸಿಎಂ ಕೆಸಿಆರ್, ನಾನೇ ನಿರಾಕರಿಸಿದೆ': ತೆಲಂಗಾಣದಲ್ಲಿ ಪ್ರಧಾನಿ ಮೋದಿ ಸಂಚಲನಾತ್ಮಕ ಹೇಳಿಕೆ