ನವದೆಹಲಿ : ದೆಹಲಿಯಲ್ಲಿ ರೈತರನ್ನ ಉದ್ದೇಶಿತ ಟ್ರ್ಯಾಕ್ಟರ್ ರ‍್ಯಾಲಿಗೆ ಅಡ್ಡಿಪಡಿಸಲು ಮತ್ತು ರೈತರ ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ತನಿಖೆ ಸಂಬಂಧ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ವಿಷಯದಲ್ಲಿ ನ್ಯಾಯಯುತ ತನಿಖೆ ನಡೆಸಲು ಹರಿಯಾಣ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.
ಕಳೆದ ಶುಕ್ರವಾರ ರಾತ್ರಿ, ರೈತ ಮುಖಂಡರು ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲಿ ಮುಖವಾಡ ಧರಿಸಿದ್ದ ವ್ಯಕ್ತಿಯನ್ನು ಪ್ರಸ್ತುತಪಡಿಸಲಾಗಿತ್ತು. ಆ ವ್ಯಕ್ತಿಯು ತಾನು, ಜನವರಿ 26ರಂದು ಯೋಜಿತ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಾಲ್ಕು ರೈತರನ್ನು ಕೊಲ್ಲಲು ಮತ್ತು ಹಿಂಸಾಚಾರ ಪ್ರಚೋದಿಸುವ 10 ಸದಸ್ಯರ ತಂಡದ ಭಾಗವಾಗಿದ್ದೇನೆ ಎಂದು ಹೇಳಿದ್ದನು.
ಆದರೆ, ಸೋನೆಪತ್ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ, ಆತ ತನ್ನ ಹೇಳಿಕೆ ಬದಲಾಯಿಸಿದ್ದಾನೆ. ರೈತರು ಸಿದ್ಧಪಡಿಸಿದ ಸ್ಕ್ರಿಪ್ಟ್‌ನ ತಾನು ಹೇಳಿದ್ದಾಗಿ ಯು-ಟರ್ನ್ ಹೊಡೆದಿದ್ದಾನೆ. ಈ ವ್ಯಕ್ತಿಯನ್ನು ಪೊಲೀಸರು ಪ್ರಶ್ನಿಸುವ ವಿಡಿಯೋ ಕೂಡ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಸಿಕ್ಕಿಬಿದ್ದ ಆರೋಪಿಯು ರೈತರ ಪ್ರತಿಭಟನೆಗೆ ಅಡ್ಡಿಯುಂಟು ಮಾಡುವ ಯೋಜನೆ ಒಪ್ಪಿಕೊಂಡಿದ್ದಾನೆ.