ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ನಿನ್ನೆಯಿಂದ ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಇಂದೂ ಸಹ ಪ್ರತಿಭಟನೆ ಮುಂದುವರೆದಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ.
ವಿರೋಧ ಪಕ್ಷಗಳ ನಾಯಕರು ಇಂದು ಕಾಂಗ್ರೆಸ್ ಮುಖ್ಯಸ್ಥ ಮಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಸಂಸತ್ತಿನ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು. ಈ ವೇಳೆ INC, DMK, SP, JD(U), BRS, CPI(M), RJD, NCP, CPI, IUML, MDMK, ಕೇರಳ ಕಾಂಗ್ರೆಸ್, TMC, RSP, AAP, J&K NC ಮತ್ತು ಶಿವಸೇನೆ ನಾಯಕರು ಉಪಸ್ಥಿತರಿದ್ದರು. ಸಭೆ ಬಳಿಕ ರಾಹುಲ್ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಲೋಕಸಭೆಗೆ ಕಪ್ಪು ಬಟ್ಟೆ ಧರಿಸಿ ಹಾಜರಾಗಲು ನಿರ್ಧರಿಸಿದ್ದಾರೆ.
ಭಾನುವಾರ ರಾಜ್ ಘಾಟ್‌ನಲ್ಲಿ ನಡೆದ ‘ಸಂಕಲ್ಪ ಸತ್ಯಾಗ್ರಹ’ದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲಿಕಾರ್ಜುನ್ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಹಿರಿಯ ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ, ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಪ್ರಮೋದ್ ತಿವಾರಿ, ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು ಅಧೀರ್ ರಂಜನ್ ಚೌಧರಿ ಭಾಗವಹಿಸಿದ್ದರು. ದೇಶಾದ್ಯಂತ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಸತ್ಯಾಗ್ರಹದ ವೇಳೆ ಮಾತನಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಸಂಸದರು ತಮ್ಮ ತಂದೆ ರಾಜೀವ್ ಗಾಂಧಿ ಅವರನ್ನು ನಿಂದಿಸಿದ್ದು, ಸಹೋದರ ರಾಹುಲ್ ಗಾಂಧಿ ಅವರನ್ನು ‘ಮೀರ್ ಜಾಫರ್’ ಎಂದು ಕರೆದಿದ್ದಾರೆ. ತಾಯಿ ಸೋನಿಯಾ ಗಾಂಧಿ ಅವರ ಮೇಲೆ ಸಹ ಈ ಹಿಂದೆ ಹಲ್ಲೆ ನಡೆಸಲಾಗಿತ್ತು. ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ ಯಾರನ್ನೂ ಏಕೆ ಅನರ್ಹಗೊಳಿಸಿಲ್ಲ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ:ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ
ಒಂದೆಡೆ, ರಾಹುಲ್ ಗಾಂಧಿ ಒಬಿಸಿ ಸಮುದಾಯದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸುತ್ತಿದೆ. ಇನ್ನೊಂದೆಡೆ, "ದೇಶದಿಂದ ಪರಾರಿಯಾಗಿರುವ ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ ಒಬಿಸಿಗೆ ಸೇರಿದವರಲ್ಲ. ಆದರೆ, ಅವರು ಜನರ ಹಣ ಪಡೆದು ಓಡಿ ಹೋಗಿದ್ದಾರೆ. ಹೀಗೆ ಪಲಾಯನ ಮಾಡಿದವರನ್ನು ಟೀಕಿಸಿದರೆ ನಿಮಗೇಕೆ ನೋವಾಗುತ್ತದೆ ಎಂದು ಬಿಜೆಪಿಯವರಿಗೆ ಖರ್ಗೆ ಟಾಂಗ್ ಕೊಟ್ಟರು.
ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಸೂರತ್ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಜೊತೆಗೆ, ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಿದೆ. ಇದರ ಬೆನ್ನಲ್ಲೇ (ಮಾರ್ಚ್ 24 ರಂದು) ಶುಕ್ರವಾರ ವಯನಾಡ್ ಸಂಸದ ರಾಹುಲ್ ಗಾಂಧಿಯನ್ನ ಲೋಕಸಭೆಯಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ಅನರ್ಹತೆಯನ್ನು ವಿರೋಧಿಸಿ ಇದೀಗ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಸಿದೆ.