ನವದೆಹಲಿ : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಪ್ರಚಾರ ನಡೆಸಿಲ್ಲ ಎಂಬ ಊಹಾಪೋಹಕ್ಕೆ ಕಾಂಗ್ರೆಸ್ ತೆರೆ ಎಳೆದಿದೆ. ಕಳೆದ ವಾರಗಳಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಸ್ಥಾನಕ್ಕೆ ಭೇಟಿ ನೀಡಿದ್ದರೂ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ರಾಹುಲ್ ಗಾಂಧಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಆದರೆ ರಾಜಸ್ಥಾನ ವೇಳಾಪಟ್ಟಿ ಪ್ರಕಟವಾದಾಗಿನಿಂದ ನಾಪತ್ತೆಯಾಗಿದ್ದರು ಎಂಬ ವದಂತಿಗಳು ಹರಡಿದ್ದವು. ಅವರು ಗೆಹ್ಲೋಟ್ ಜೊತೆ ಮನಸ್ತಾಪ ಹೊಂದಿದ್ದಾರೆ ಎಂಬ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತ್ತು.
ಆದರೆ ಕಾಂಗ್ರೆಸ್ ಈ ಎಲ್ಲ ವದಂತಿಗಳನ್ನು ತಳ್ಳಿಹಾಕಿದೆ. ’’ಬಿಜೆಪಿಯವರು ನಮ್ಮ ವಿರುದ್ಧ ಮಾಡುತ್ತಿರುವ ಅಪಪ್ರಚಾರ. ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ನಮ್ಮ ಉನ್ನತ ನಾಯಕತ್ವವು ಇತರ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಚಾರದಲ್ಲಿ ನಿರತವಾಗಿತ್ತು. ಅವರು ಶೀಘ್ರದಲ್ಲೇ ರಾಜಸ್ಥಾನಕ್ಕೆ ಬರಲಿದ್ದಾರೆ‘‘ ಎಂದು ರಾಜಸ್ಥಾನದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಎಸ್ ರಾಂಧವಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ನವೆಂಬರ್ 16 ರಂದು ಮೂರು ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ರಾಹುಲ್ ರಾಜಸ್ಥಾನದ ಸೂರತ್‌ಗಢ, ತಾರಾನಗರ ಮತ್ತು ನೋಹರ್‌ನಲ್ಲಿ ಪ್ರಚಾರ ಮಾಡುವ ಸಾಧ್ಯತೆಯಿದೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶಗಳು ಹೊರ ಬೀಳುತ್ತವೆ. ನವೆಂಬರ್ 16 ರಿಂದ ಖರ್ಗೆ ಮೂರು ದಿನ, ರಾಹುಲ್ ನಾಲ್ಕು ದಿನ ಮತ್ತು ಪ್ರಿಯಾಂಕಾ ಮೂರು ದಿನ ರಾಜಸ್ಥಾನದಲ್ಲಿ ಕಳೆಯಲಿದ್ದಾರೆ ಎಂದು ಎಐಸಿಸಿ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.