ತಿರುವನಂತಪುರಂ (ಕೇರಳ):ರಾಜ್ಯ ಕಾಂಗ್ರೆಸ್ ಘಟಕ ಡಿಜಿಪಿ ಕಚೇರಿ ವರೆಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ. ಈ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲುಗಳನ್ನು ತೂರಿದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ಧ ಯುವ ಕಾಂಗ್ರೆಸ್ ಮತ್ತು ಕೆಎಸ್‌ಯು ಕಾರ್ಯಕರ್ತರ ಮೇಲೆ ಪೊಲೀಸರು ಮತ್ತು ಸಿಪಿಎಂ ಕಾರ್ಯಕರ್ತರು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಕೆಪಿಸಿಸಿ ಈ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು.
ಕನಕಕುನ್ನುವಿನಲ್ಲಿರುವ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಡಿಜಿಪಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಾಂತಿಯುತವಾಗಿ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಏಕಾಏಕಿ ಅಶ್ರುವಾಯು ಪ್ರಯೋಗಿಸಿದ್ದರಿಂದ ಕಾರ್ಯಕರ್ತರು ಚದುರಿದರು. ವಿ.ಡಿ.ಸತೀಸನ್ ಅವರು ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡುತ್ತಿದ್ದಾಗ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಇದರಿಂದ ಅವರು ತಕ್ಷಣ ಭಾಷಣವನ್ನು ಮಧ್ಯಕ್ಕೆ ನಿಲ್ಲಿಸಿದರು. ಆಕ್ರೋಶಗೊಂಡ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.