ನವದೆಹಲಿ: ರಾಹುಲ್ ಗಾಂಧಿ ಅವರ ಪತ್ರದೊಂದಿಗೆ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ 'ಹಾಥ್ ಸೇ ಹಾಥ್ ಜೋಡೋ ಯಾತ್ರೆ'ಗೆ ಮುನ್ನ ಕಾಂಗ್ರೆಸ್ ಬುಧವಾರ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಲಿದೆ. ನೀಡಿದ ಭರವಸೆಗಳನ್ನು ಬಿಜೆಪಿ ಈಡೇರಿಸದ ಬಗ್ಗೆ ಜನರ ಗಮನ ಸೆಳೆಯಲು ಒಟ್ಟು 22 ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಜನರನ್ನು ಸಂಪರ್ಕಿಸುವ ಕಾರ್ಯಕ್ರಮದ ಭಾಗವಾಗಿ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬರೆದ ಪತ್ರವನ್ನು ಜನವರಿ 26 ರಿಂದ ಕೇಂದ್ರ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಜೊತೆಗೆ ಪ್ರತಿ ಮನೆಗೆ ತಲುಪಿಸುವುದಾಗಿ ಘೋಷಿಸಿದೆ. ಎರಡು ತಿಂಗಳ ಸುದೀರ್ಘ ಕಾಲ ನಡೆಯಲಿರುವ ಈ ಕಾರ್ಯಕ್ರಮ, 2.5 ಲಕ್ಷ ಗ್ರಾಮ ಪಂಚಾಯಿತಿಗಳು, ಆರು ಲಕ್ಷ ಗ್ರಾಮಗಳು ಮತ್ತು 10 ಲಕ್ಷ ಬೂತ್‌ಗಳ ವ್ಯಾಪ್ತಿಯಲ್ಲಿ ನಡೆಯಲಿದೆ. ಕಾಂಗ್ರೆಸ್ ತನ್ನ ರಾಜಕೀಯ ಸಂದೇಶವನ್ನು ಜನರ ಬಳಿಗೆ ಕೊಂಡೊಯ್ಯಲು ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮ ಇದಾಗಿದೆ.
ನಮ್ಮ ಗುರಿ ಮುಟ್ಟುತ್ತೇವೆ:'ಹಾಥ್ ಸೇ ಹಾಥ್ ಜೋಡೋ' ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಹಿರಿಯ ನಾಯಕ ಜೈರಾಮ್ ರಮೇಶ್, ಇದು ಭಾರತ್ ಜೋಡೋ ಯಾತ್ರೆಯಿಂದ ಪಕ್ಷದ ಚಿಹ್ನೆ ಮತ್ತು ರಾಜಕೀಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ. ಆದಾಗ್ಯೂ, ಕೆಲ ರಾಜ್ಯಗಳಲ್ಲಿ ಪಕ್ಷ ದುರ್ಬಲವಾಗಿದ್ದರೂ ಗುರಿಯನ್ನು ಮುಟ್ಟಲಾಗುವುದು ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಬರೆದ ಪತ್ರದಲ್ಲಿ - ಕಣ್ಣಿಗೆ ಕಾಣುವಂತೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿದೆ. ಯುವಜನರಲ್ಲಿ ನಿರುದ್ಯೋಗ, ಅಸಹನೀಯ ಬೆಲೆ ಏರಿಕೆ, ತೀವ್ರ ಕೃಷಿ ಸಂಕಷ್ಟ ಮತ್ತು ದೇಶದ ಸಂಪೂರ್ಣ ಸಂಪತ್ತನ್ನು ಕಾರ್ಪೊರೇಟ್ಗಳು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ.