ನವದೆಹಲಿ:ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಳೆ (ಅಕ್ಟೋಬರ್ 17) ಚುನಾವಣೆ ನಡೆಯಲಿದೆ. ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಕರ್ನಾಟಕದ ಬಳ್ಳಾರಿಯಲ್ಲಿ ಮತ ಚಲಾಯಿಸಲಿದ್ದು, ನಿರ್ಗಮಿತ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಚುನಾವಣೆಗೆ ರಾಹುಲ್ ಗಾಂಧಿ ನಾಳೆ ಎಲ್ಲಿ ಮತ ಚಲಾಯಿಸುತ್ತಾರೆ ಎಂಬ ಪ್ರಶ್ನೆಗಳಿವೆ. ಈ ಬಗ್ಗೆ ಯಾವುದೇ ಊಹಾಪೋಹ ಇರಬಾರದು. ರಾಹುಲ್ ಗಾಂಧಿ ಹಾಗೂ ಪಿಸಿಸಿ ಪ್ರತಿನಿಧಿಗಳಾದ ಸುಮಾರು 40 ಭಾರತ್ ಯಾತ್ರಿಗಳು ಬಳ್ಳಾರಿಯ ಸಂಗನಕಲ್ಲುನಲ್ಲಿರುವ ಯಾತ್ರೆಯ ಶಿಬಿರದಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಯಲ್ಲಿ ಅವಘಡ: ರಾಗಾ ಸಮೀಪದಲ್ಲೇ ಶಾರ್ಟ್ ಸರ್ಕ್ಯೂಟ್ , ಗ್ರಾಪಂ ಅಧ್ಯಕ್ಷ ಸೇರಿ ಐವರಿಗೆ ಗಾಯ
ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನಾಳೆ ನಡೆಯಲಿರುವ ಚುನಾವಣೆಗೆ ಎಲ್ಲ ರಾಜ್ಯಗಳಲ್ಲಿ 67 ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರ (ಸಿಇಎ) ಸಹ ತಿಳಿಸಿದೆ.
ಗೌಪ್ಯ ಮತದಾನ: ಈ ಬಗ್ಗೆ ಸಿಇಎ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮಾತನಾಡಿ, ಎಐಸಿಸಿ ಕಚೇರಿಯಲ್ಲಿ ವಿಶೇಷವಾಗಿ ಎಲ್ಲ ಹಿರಿಯ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ದೆಹಲಿಯಲ್ಲಿ ನೆಲೆಸಿರುವ ಪಕ್ಷದ ಗುರುತಿನ ಚೀಟಿ ಹೊಂದಿರುವ ಎಲ್ಲರಿಗೂ ಮತ ಚಲಾವಣೆಗೆ ಅವಕಾಶ ಇರುತ್ತದೆ. ಜೊತೆಗೆ ಬೇರೆ ಕಡೆ ಮತ ಚಲಾವಣೆ ಮಾಡುವ ಕುರಿತು ನಮಗೆ ತಿಳಿಸಿದರೆ, ನಾವು ಅಲ್ಲಿಯೂ ವ್ಯವಸ್ಥೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.