ಬೆಂಗಳೂರು/ನವದೆಹಲಿ:24 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯುತ್ತಿದ್ದು, ಗಾಂಧಿಯೇತರ ಕುಟುಂಬದ ವ್ಯಕ್ತಿಯೊಬ್ಬರ ಪಟ್ಟಾಭಿಷೇಕಕ್ಕೆ ಮತದಾನ ನಡೆಯುತ್ತಿದೆ. ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ಮತದಾನ ಮಾಡಿದರು.
ಮತದಾನಕ್ಕೂ ಮೊದಲು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಇದು ನಮ್ಮ ಆಂತರಿಕ ಚುನಾವಣೆಯ ಒಂದು ಭಾಗವಾಗಿದೆ. ನಾವು ಒಬ್ಬರಿಗೊಬ್ಬರು ಏನೇ ಹೇಳಿದರೂ ಅದು ಸ್ನೇಹಪೂರ್ವಕವಾಗಿರುತ್ತದೆ. ಎಲ್ಲರೂ ಸೇರಿ ಪಕ್ಷ ಕಟ್ಟಬೇಕು. ತರೂರ್ ನನಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದರು. ನಾನು ಕೂಡ ಅವರಿಗೆ ಶುಭ ಕೋರಿದ್ದೇನೆ ಎಂದರು.
ಪಕ್ಷ ಪುಟಿದೇಳುವುದು ಪಕ್ಕಾ:ಇನ್ನು, ಕೇರಳದ ಪಕ್ಷದ ಕಚೇರಿಯಲ್ಲಿ ಮತದಾನ ಮಾಡಿದ ಇನ್ನೋರ್ವ ಸ್ಪರ್ಧಿ ಶಶಿ ತರೂರ್, ಕಾಂಗ್ರೆಸ್ನ ಪುನರುಜ್ಜೀವನ ಆರಂಭವಾಗಿದೆ ಎಂಬುದನ್ನು ಚುನಾವಣೆ ತೋರಿಸುತ್ತದೆ. ಪಕ್ಷದ ಭವಿಷ್ಯ ಪಕ್ಷದ ಕಾರ್ಯಕರ್ತರ ಕೈಯಲ್ಲಿದೆ. ಪಕ್ಷದ ನಾಯಕರು ಮತ್ತು ಹೈಕಮಾಂಡ್ ಖರ್ಗೆ ಅವರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ನನಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷ ಮತ್ತೆ ಪುಟಿದೇಳುವುದು ಖಂಡಿತ. ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಮಾತನಾಡಿದ್ದೇನೆ. ಅಧ್ಯಕ್ಷದ ಚುಣಾವಣೆಗೆ ಸ್ಪರ್ಧಿಸಿದರೂ ನಾವು ಸಹೋದ್ಯೋಗಿಗಳು, ಸ್ನೇಹಿತರಾಗಿದ್ದೇವೆ ಎಂದು ತರೂರ್ ಹೇಳಿದರು.