ನವದೆಹಲಿ:ನ್ಯಾಷನಲ್ ಹೆರಾಲ್ಡ್ ಹಗರಣ ಕೇಸ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದು 3ನೇ ಬಾರಿಗೆ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದರು. ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿದ್ದರು. ಇನ್ನೊಂದೆಡೆ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದೆ.
ನಿನ್ನೆ(ಮಂಗಳವಾರ) ವಿಚಾರಣೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಇಡಿ ಆರು ಗಂಟೆಗಳ ಕಾಲ ಪ್ರಶ್ನಿಸಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನ ಕುರಿತಾಗಿ ಸುಮಾರು 30 ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಡಿ ವಿಚಾರಣೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ರೈಲು ತಡೆದು ಕಾಂಗ್ರೆಸ್ ಪ್ರತಿಭಟನೆ:ಇಡಿ ವಿಚಾರಣೆಯನ್ನು ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಮುಂಬೈನ ಬೊರಿವಿಲಿ ನಿಲ್ದಾಣದಲ್ಲಿ ರೈಲು ತಡೆದ ಆಕ್ರೋಶ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗುವ ಮೊದಲೇ ಕಾಂಗ್ರೆಸ್ ಕಾರ್ಯಕರ್ತರು ರೈಲು ನಿಲ್ದಾಣವನ್ನು ಮುತ್ತಿಗೆ ಹಾಕಿ ರೈಲು ತಡೆದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಎಲ್ಲರನ್ನೂ ಹಳಿಯಿಂದ ತೆರವು ಮಾಡಿದ್ದಾರೆ. ಅಲ್ಲದೇ, ಕೆಲವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಖರ್ಗೆ ಕಪ್ಪು ಬಟ್ಟೆ ಪ್ರದರ್ಶನ:ದೆಹಲಿಯಲ್ಲೂ ಪ್ರತಿಭಟನೆ ಮುಂದುವರಿಸಿರುವ ಕಾಂಗ್ರೆಸ್ ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಪ್ರತಿಭಟಿಸಿದರು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಲೆಗೆ ಕಪ್ಪು ಬಟ್ಟೆ ಸುತ್ತಿಕೊಳ್ಳುವ ಮೂಲಕ ವಿರೋಧ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಇ.ಡಿ. ಅಧಿಕಾರಿಗಳು ಕಾಂಗ್ರೆಸ್ಗೆ ಕಿರುಕುಳ ನೀಡುತ್ತಿದೆ. ನಮ್ಮ ಅಧ್ಯಕ್ಷರ ಆರೋಗ್ಯ ಸರಿಯಿಲ್ಲದಿದ್ದರೂ ಅವರನ್ನು ಮತ್ತೆ ವಿಚಾರಣೆ ಬರುವಂತೆ ಸಮನ್ಸ್ ನೀಡಲಾಗುತ್ತಿದೆ. ಇದು ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ. ಆದರೆ ಈ ಎಲ್ಲ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ" ಎಂದರು.
"ನಾವು ಅಧಿವೇಶನ ಆರಂಭವಾದಾಗಿನಿಂದ ಸಂಸತ್ತಿನಲ್ಲಿ ಹಣದುಬ್ಬರದ ವಿಷಯವನ್ನು ಚರ್ಚಿಸಲು ಪ್ರಸ್ತಾಪಿಸುತ್ತಿದ್ದೇವೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿಲ್ಲ. ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿರುವ ಸದಸ್ಯರ ಅಮಾನತು ಮಾಡಿದ್ದು ಸರಿಯಲ್ಲ. ಆದೇಶವನ್ನು ರದ್ದುಗೊಳಿಸುವಂತೆ ಸ್ಪೀಕರ್ ಮತ್ತು ಸಭಾಪತಿಗೆ ಮನವಿ ಸಲ್ಲಿಸುತ್ತೇವೆ" ಎಂದು ಖರ್ಗೆ ಹೇಳಿದರು.
ಜೆ.ಪಿ.ನಡ್ಡಾ ಕಿಡಿ:ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಸತ್ಯಾಗ್ರಹವಲ್ಲ, ಸತ್ಯವನ್ನು ಮರೆಮಾಚುವ ಪ್ರಯತ್ನವಾಗಿದೆ. ಅವರು ಪ್ರತಿಭಟಿಸುತ್ತಿರುವುದು ಒಂದು ಕುಟುಂಬದ ರಕ್ಷಣೆಗಾಗಿಯೇ ಹೊರತು ದೇಶಕ್ಕಾಗಿ ಅಲ್ಲ. ಗಾಂಧಿ ಕುಟುಂಬಸ್ಥರು ತನಿಖಾ ಸಂಸ್ಥೆಗಳ ವಿಚಾರಣೆಯಲ್ಲಿ ಸೂಕ್ತ ರೀತಿಯಲ್ಲಿ ಉತ್ತರಿಸಬಹುದಾಗಿತ್ತು. ನಾವು ಕಾನೂನನ್ನು ಮೀರಿದವರು ಎಂಬ ಭಾವನೆ ಅವರಲ್ಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದರು.
ಇದನ್ನೂ ಓದಿ:ಸ್ವಾತಂತ್ರ್ಯದ ಅಮೃತ ಮಹೋತ್ಸವ: 12,000 ಅಡಿ ಎತ್ತರದಲ್ಲಿ 'ತಿರಂಗ' ಹಾರಿಸಿದ ಯೋಧರು