ಕರ್ನಾಟಕ

karnataka

ETV Bharat / bharat

ಈಟಿವಿ ಭಾರತ Exclusive: ವಿವಾದಗಳು ಅಂತ್ಯ.. ಕಾಂಗ್ರೆಸ್​ ಅಧ್ಯಕ್ಷರ ಚುನಾವಣೆಗೆ ಸೆ.22ರಂದು ಅಧಿಸೂಚನೆ ಪಕ್ಕಾ - ಕಾಂಗ್ರೆಸ್​ ಅಧ್ಯಕ್ಷರ ಚುನಾವಣೆ ವಿವಾದ

ಅಕ್ಟೋಬರ್​ 17ರಂದು ನಿಗದಿಯಾಗಿರುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆಗೆ ಸೆಪ್ಟೆಂಬರ್‌ 22ರಂದು ಅಧಿಸೂಚನೆ ಪ್ರಕಟಣೆ, ಸೆಪ್ಟೆಂಬರ್ 24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

congress-president-poll-notification-sep-22
ಕಾಂಗ್ರೆಸ್​ ಅಧ್ಯಕ್ಷರ ಚುನಾವಣೆಗೆ ಸೆ.22ರಂದು ಅಧಿಸೂಚನೆ ಪಕ್ಕಾ

By

Published : Sep 11, 2022, 7:48 PM IST

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದ್ದಂತೆ ಎದ್ದಿದ್ದ ಎಲ್ಲ ವಿವಾದಗಳು ಅಂತ್ಯವಾಗಿವೆ. ನಿಗದಿಯಂತೆ ಮುಂದಿನ ಅಧ್ಯಕ್ಷರ ಚುನಾವಣೆಗೆ ಸೆಪ್ಟೆಂಬರ್‌ 22ರಂದು ಅಧಿಸೂಚನೆ ಪ್ರಕಟಿಸಲು ಸಿದ್ಧ ಎಂದು ಕಾಂಗ್ರೆಸ್‌ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್‌ ಮಿಸ್ತ್ರಿ ತಿಳಿಸಿದ್ದಾರೆ. ಅಲ್ಲದೇ, ನಾಮಪತ್ರ ಸಲ್ಲಿಕೆಗೂ ಮುನ್ನ ಮತದಾರರ ಪಟ್ಟಿ ಪ್ರಕಟಿಸುವ ವಿವಾದ ಅಂತ್ಯಗೊಂಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ನಾವು ಈಗಾಗಲೇ ಘೋಷಿಸಿದಂತೆ ಚುನಾವಣಾ ಪ್ರಕ್ರಿಯೆಯೊಂದಿಗೆ ಮುಂದುವರಿಯುತ್ತಿದ್ದೇವೆ. ಸೆಪ್ಟೆಂಬರ್ 22ರಂದು ಚುನಾವಣಾ ಅಧಿಸೂಚನೆಯನ್ನೂ ಪ್ರಕಟಿಸುತ್ತೇವೆ ಮತ್ತು ಸೆಪ್ಟೆಂಬರ್ 24ರಿಂದ 30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಮಧುಸೂದನ್ ಮಿಸ್ತ್ರಿ ಭಾನುವಾರ 'ಈಟಿವಿ ಭಾರತ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಸೆಪ್ಟೆಂಬರ್ 21ರೊಳಗೆ ಚುನಾವಣೆ ಮುಗಿಯಬೇಕಿತ್ತು. ಈ ಕಾರಣಾಂತರಗಳಿಂದ ಅಕ್ಟೋಬರ್ 17ಕ್ಕೆ ಮುಂದೂಡಲಾಗಿದೆ. ಈ ನಡುವೆ ಆಗಸ್ಟ್ 28ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ಅನುಮೋದಿಸಲಾಗಿತ್ತು. ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದ ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಆನ್‌ಲೈನ್‌ ಮೂಲಕವೇ ಈ ಸಭೆಯಲ್ಲಿ ಭಾಗವಹಿಸಿದ್ದರು.

ಚುನಾವಣಾ ವಿವಾದ ಏನಾಗಿತ್ತು?: ಕಾಂಗ್ರೆಸ್​ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾದ ಬೆನ್ನಲ್ಲೇ ಪಕ್ಷದ ನಾಯಕರಿಂದಲೇ ಅಪಸ್ವರ ಕೇಳಿ ಬಂದಿತ್ತು. ಹಿರಿಯ ಭಿನ್ನಮತೀಯರ ಗುಂಪು ಜಿ23ರ ಪ್ರಮುಖ ಸದಸ್ಯರಾಗಿರುವ ರಾಜ್ಯಸಭೆಯ ಮಾಜಿ ಉಪ ನಾಯಕ ಆನಂದ್ ಶರ್ಮಾ ಸಿಡಬ್ಲ್ಯೂಸಿ ಸಭೆಯಲ್ಲೇ ಮತದಾರರ ಪಟ್ಟಿ ಬಗ್ಗೆ ಪ್ರಶ್ನಿಸಿದ್ದರು.

ಅಲ್ಲದೇ, ಮನೀಶ್ ತಿವಾರಿ, ಶಶಿ ತರೂರ್, ಪ್ರದ್ಯುತ್ ಬೊರ್ಡೊಲೊಯ್, ಕಾರ್ತಿ ಚಿದಂಬರಂ ಮತ್ತು ಅಬ್ದುಲ್ ಖಲೀಕ್ ಸೇರಿದಂತೆ ಐವರು ಲೋಕಸಭೆಯ ಸಂಸದರು ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದು ಪಕ್ಷದ ಹೊಸ ಅಧ್ಯಕ್ಷರ ಚುನಾವಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬೇಕು. ಸೆಪ್ಟೆಂಬರ್ 24 ರಂದು ನಾಮಪತ್ರ ಸಲ್ಲಿಕೆ ಆರಂಭವಾಗುವ ಮುನ್ನವೇ ಮೊದಲ ಮತದಾರರ ಪಟ್ಟಿಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದರು. ಐವರು ಸದಸ್ಯರಲ್ಲಿ ಮನೀಶ್ ತಿವಾರಿ ಮತ್ತು ಶಶಿ ತರೂರ್ ಕೂಡ ಜಿ23 ಭಾಗವಾಗಿದ್ದರಿಂದ ಇದು ಗಾಂಧಿ ಕುಟುಂಬದ ನಿಷ್ಠಾವಂತರ ಕಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ:ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ? ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ

ಹೀಗಾಗಿಯೇ ನಾಮಪತ್ರ ಸಲ್ಲಿಸಲು ಇಚ್ಛಿಸುವ ಯಾರಾದರೂ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಸೆಪ್ಟೆಂಬರ್ 20ರಿಂದ ಎಐಸಿಸಿ ಪ್ರಧಾನ ಕಚೇರಿಯಲ್ಲಿರುವ ನನ್ನ ಕಚೇರಿಗೆ ಭೇಟಿ ನೀಡಬಹುದು ಅಥವಾ ಅವರು ಹೆಸರುಗಳನ್ನು ಪರಿಶೀಲಿಸಲು ರಾಜ್ಯ ಘಟಕದ ಪ್ರಧಾನ ಕಚೇರಿಗೂ ಹೋಗಬಹುದು ಎಂದು ನಾನು ಐದು ಸಂಸದರಿಗೆ ತಿಳಿಸಿದ್ದೇನೆ ಎಂದು ಮಿಸ್ತ್ರಿ ಹೇಳಿದರು.

ನಾಮಪತ್ರ ಸಲ್ಲಿಸುವ ಯಾರೇ ಆಗಿದ್ದರೂ ಅವರನ್ನು ಕನಿಷ್ಠ 10 ಪ್ರತಿನಿಧಿಗಳು ಬೆಂಬಲಿಸಬೇಕು. ಅವರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ ನಂತರ ಅವರಿಗೆ ಪಕ್ಷದ ಸಂವಿಧಾನದ ಪ್ರಕಾರ ಮತದಾರರ ಪಟ್ಟಿಯ ಪ್ರತಿಯನ್ನು ನೀಡಲಾಗುತ್ತದೆ. ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಕೆ ಮುಗಿದ ನಂತರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸ್ಪಷ್ಟನೆ ನೀಡಿರುವ ಮಿಸ್ತ್ರಿ, ನನ್ನ ಉತ್ತರದ ಬಗ್ಗೆ ಎಲ್ಲ ಐವರು ಸಂಸದರು ಕೂಡ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶಶಿ ತರೂರ್ ಸಂತೃಪ್ತಿ:ಇತ್ತ, ಪಕ್ಷದ ಚುನಾವಣೆ ನೀಡಿದ ಸ್ಪಷ್ಟೀಕರಣಗಳಿಂದ ನಾನು ಸಂತಸಗೊಂಡಿದ್ದೇನೆ. ನನ್ನಂತೆಯೇ ಪಕ್ಷವನ್ನು ಬಲಪಡಿಸುವ ಕಾರ್ಯವು ಚುನಾವಣಾ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಹಲವರು ಇಷ್ಟಪಡುತ್ತಾರೆ. ನಾನು ಮಿಸ್ತ್ರಿ ಅವರೊಂದಿಗೆ ಮಾತನಾಡಿದ್ದೇನೆ. ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ನಾವು ಸ್ಪಷ್ಟೀಕರಣವನ್ನು ಬಯಸುತ್ತೇವೆಯೇ, ಹೊರತು ಬೇರೆ ಯಾವ ಉದ್ದೇಶ ನಮ್ಮದಲ್ಲ ಎಂದು ಹೇಳಿದ್ದೇನೆ ಎಂದು ಶಶಿ ತರೂರ್ ತಿಳಿಸಿದ್ದಾರೆ. ತರೂರ್ ಅವರ ಅಭಿಪ್ರಾಯಗಳನ್ನೇ ತಿವಾರಿ, ಚಿದಂಬರಂ, ಬೊರ್ಡೊಲೊಯ್ ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:'ಕೈ'​ ಪಕ್ಷದ ಅಧ್ಯಕ್ಷರ ಚುನಾವಣೆ: ಪಾರದರ್ಶಕತೆ, ನ್ಯಾಯಸಮ್ಮತತೆ ಬಗ್ಗೆ ತರೂರ್​​ ಸೇರಿ ನಾಲ್ವರು ಸಂಸದರ ಕಳವಳ

ಇನ್ನು, ಪಕ್ಷದ ಅಧ್ಯಕ್ಷರ ಸ್ಥಾನದ ಚುನಾವಣೆಗೆ ಪೂರ್ವಭಾವಿಯಾಗಿ ದೇಶಾದ್ಯಂತ ಮೊದಲ ಬಾರಿಗೆ ಡಿಜಿಟಲ್ ಸದಸ್ಯತ್ವ ಸೇರಿದಂತೆ ಬೃಹತ್ ಸದಸ್ಯತ್ವ ಅಭಿಯಾನವನ್ನು ಕಾಂಗ್ರೆಸ್ ನಡೆಸಿದೆ ಎಂದು ಸಿಇಸಿ ಮೂಲಗಳು ತಿಳಿಸಿವೆ. ಅಲ್ಲದೇ, ಎಲ್ಲ 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಾಗಿದೆ. ಈ ಪ್ರತಿನಿಧಿಗಳು ಮುಂದಿನ ಕಾಂಗ್ರೆಸ್ ಅಧ್ಯಕ್ಷರಿಗೆ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಇಷ್ಟೇ ಅಲ್ಲ, ಮೊದಲ ಬಾರಿಗೆ ಈ ಪ್ರತಿನಿಧಿಗಳಿಗೆ ಕ್ಯೂಆರ್ ಕೋಡ್ ಆಧಾರಿತ ಗುರುತಿನ ಚೀಟಿಗಳನ್ನು ನೀಡಲಾಗಿದೆ. ನಾಮಪತ್ರ ಸಲ್ಲಿಕೆ ಮತ್ತು ಮತದಾನ ಎರಡರಲ್ಲೂ ನ್ಯಾಯಯುತವಾದ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಲು ಇದರಲ್ಲಿ ಪ್ರತಿನಿಧಿಗಳ ವಿವರಗಳನ್ನು ನೀಡಲಾಗಿದೆ ಎಂದು ಸಿಇಸಿ ಮೂಲಗಳು ಹೇಳಿವೆ.

ಇದನ್ನೂ ಓದಿ:ಅಕ್ಟೋಬರ್ 17ಕ್ಕೆ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ

ABOUT THE AUTHOR

...view details