ನವದೆಹಲಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂಡಿಯಾ ಮೈತ್ರಿಕೂಟದ ಅಧ್ಯಕ್ಷ ಪಟ್ಟ ನೀಡಲಾಗಿದೆ. ಶನಿವಾರ ಮಧ್ಯಾಹ್ನ ಇಂಡಿಯಾ ಮೈತ್ರಿಕೂಟದ ನಾಯಕರ ವರ್ಚುಯಲ್ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಇದಲ್ಲದೇ, ಜೆಡಿಯು ನಾಯಕ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಅಥವಾ 'ಇಂಡಿಯಾ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ' ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಒಕ್ಕೂಟ ಆಗಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವಿಕೆ, ಸೀಟು ಹಂಚಿಕೆ ಕಾರ್ಯಸೂಚಿಗಳು ಮತ್ತು ಇತರ ವಿಷಯಗಳು ಸೇರಿದಂತೆ ಒಕ್ಕೂಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಇಂಡಿಯಾ ಒಕ್ಕೂಟದ ನಾಯಕರು ಶನಿವಾರ ಮಧ್ಯಾಹ್ನ ವರ್ಚುಯಲ್ ಸಭೆ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ಮಾತು:ಸಭೆ ನಂತರ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು, ''ಇಂಡಿಯಾ ಒಕ್ಕೂಟದ ನಾಯಕರು ಇಂದು ಆನ್‌ಲೈನ್‌ನಲ್ಲಿ ಭೇಟಿಯಾಗಿ ಮೈತ್ರಿ ಕುರಿತು ಫಲಪ್ರದ ಚರ್ಚೆ ನಡೆಸಿದರು. ಸೀಟು ಹಂಚಿಕೆಯ ಕುರಿತು ಸಕಾರಾತ್ಮಕವಾಗಿ ಮಾತುಕತೆ ನಡೆದಿರುವುದು ಎಲ್ಲರಿಗೂ ಸಂತಸ ತಂದಿದೆ. ವಿಚಾರದಿಂದ ಎಲ್ಲರಿಗೂ ತೃಪ್ತಿ ತಂದಿದೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
''ಮುಂದಿನ ದಿನಗಳಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಜಂಟಿ ಕಾರ್ಯಕ್ರಮಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ದೇಶದ ಜನರ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲು ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಮೈತ್ರಿಕೂಟದ ಪಕ್ಷಗಳನ್ನು ಆಹ್ವಾನಿಸಿದ್ದಾರೆ. ಜೊತೆಗೆ ಈ ದೇಶದ ಸಾಮಾನ್ಯ ಜನರನ್ನು ಕಾಡುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಎತ್ತಲು ಅವಕಾಶವಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ'' ಎಂದು ಖರ್ಗೆ ತಿಳಿಸಿದ್ದಾರೆ.