ನವದೆಹಲಿ: ಛತ್ತೀಸ್ಗಢದ ರಾಯಪುರದಲ್ಲಿ ಫೆಬ್ರವರಿ 24ರಿಂದ 26ರವರೆಗೆ ಕಾಂಗ್ರೆಸ್ ಅಧಿವೇಶನ ಆಯೋಜಿಸಲಾಗಿದೆ. ಈ ಅಧಿವೇಶನದಲ್ಲಿ ನಡೆಯುವ ಕಾಂಗ್ರೆಸ್ ಸ್ಟೀರಿಂಗ್ ಸಮಿತಿ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಧಿವೇಶನದ ಮೊದಲ ದಿನವೇ ಈ ಸಭೆ ಕರೆಯಲಾಗಿದೆ. ಪಕ್ಷದಲ್ಲಿ ಮಹತ್ವದ ನಿರ್ಣಯಕಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಗೆ ಚುನಾವಣೆ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಫೆಬ್ರವರಿ 24ರಂದು ಸ್ಟೀರಿಂಗ್ ಸಮಿತಿ ಸಭೆ ನಡೆಸಲಿದ್ದಾರೆ. ಸದ್ಯ ಸಿಡಬ್ಲ್ಯುಸಿ ರಚಿಸಬೇಕಾಗಿದೆ. ಆದರೆ, ಇದು ಚುನಾವಣೆಯ ಮೂಲಕ ಪುನರ್ ರಚಿಸಲಾಗುವುದೋ ಅಥವಾ ನಾಮನಿರ್ದೇಶನ ಪ್ರಕ್ರಿಯೆ ನಡೆಯಲಿದೆಯೋ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಸಿಡಬ್ಲ್ಯೂಸಿ ಚುನಾವಣೆ ಭರವಸೆ ನೀಡಿದ್ದ ಖರ್ಗೆ:ಕಾಂಗ್ರೆಸ್ ಪಕ್ಷದೊಳಗೆ ಸಿಡಬ್ಲ್ಯೂಸಿ ಮಹತ್ವದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. 1998ರಲ್ಲಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಾಗಿನಿಂದ ಸದಸ್ಯರನ್ನು ನಾಮನಿರ್ದೇಶನ ಮಾಡುವ ಮೂಲಕ ಈ ಸಿಡಬ್ಲ್ಯುಸಿ ರಚಿಸಿಕೊಂಡು ಬರಲಾಗಿದೆ. ಇದರಿಂದ ಕಳೆದ ಎರಡು ದಶಕಗಳಲ್ಲಿ ಉನ್ನತ ಮಂಡಳಿಗೆ ಸದಸ್ಯರು ಚುನಾಯಿತರಾಗಿಲ್ಲ. ಆದರೆ, ಕಳೆದ ವರ್ಷ ಪಕ್ಷದ ಅಧ್ಯಕ್ಷರ ಚುನಾವಣೆಯ ಪ್ರಚಾರದ ವೇಳೆ ಖರ್ಗೆ ಸಿಡಬ್ಲ್ಯೂಸಿ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರು.
ಅಕ್ಟೋಬರ್ 26ರಂದು ಕಾಂಗ್ರೆಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಖರ್ಗೆ ಸಿಡಬ್ಲ್ಯೂಸಿ ವಿಸರ್ಜಿಸಿದ್ದರು. ಇದರ ಬದಲಿಗೆ ಪಕ್ಷದ ದಿನನಿತ್ಯದ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಸ್ಟೀರಿಂಗ್ ಸಮಿತಿ ರಚಿಸಿದ್ದರು. ಈ ಸ್ಟೀರಿಂಗ್ ಸಮಿತಿಯಲ್ಲಿ ಸಿಡಬ್ಲ್ಯೂಸಿ ಸದಸ್ಯರೇ ಹೆಚ್ಚಾಗಿ ಸೇರಿಸಿದ್ದರು. ಅಂದಿನಿಂದ ಕಾಂಗ್ರೆಸ್ ನೂತಕ ಅಧ್ಯಕ್ಷ ಖರ್ಗೆ, ಮಹತ್ವದ ಸಿಡಬ್ಲ್ಯೂಸಿಗೆ ಚುನಾವಣೆ ನಡೆಸುತ್ತಾರೋ ಅಥವಾ ಇಲ್ಲವೇ ಎಂಬ ಚರ್ಚೆಗಳು ಆರಂಭವಾಗಿದ್ದವು.