ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಕ್ಷದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಇಂದು (ಸೆಪ್ಟೆಂಬರ್ 30) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಶಶಿ ತರೂರ್, ದಿಗ್ವಿಜಯ್ ಸಿಂಗ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗುತ್ತದೆ.
ದಿಗ್ವಿಜಯ್ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ಬೆಂಬಲವನ್ನು ಪಡೆದಿದ್ದಾರೆ. ಈಗಾಗಲೇ ಜೈವರ್ಧನ್ ಸಿಂಗ್ ತಡರಾತ್ರಿ ದೆಹಲಿಗೆ ತಲುಪಿದ್ದು, ತಂದೆ ದಿಗ್ವಿಜಯ್ ಜೊತೆ ಚುನಾವಣಾ ತಂತ್ರವನ್ನು ರೂಪಿಸಿದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ದಿಗ್ವಿಜಯ್ ಸಿಂಗ್ ಇಂದು ನಾಮಪತ್ರ ಸಲ್ಲಿಸಲಿದ್ದು, ಇದರ ಅಡಿಯಲ್ಲಿ ಜೈವರ್ಧನ್ ಸಿಂಗ್ ಕೂಡ ಚುನಾವಣೆಯಲ್ಲಿ ತಂದೆಯನ್ನು ಬೆಂಬಲಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ದಿಗ್ವಿಜಯ್ ಸಿಂಗ್ ಅವರ ಮುಂದೆ ಶಶಿ ತರೂರ್ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ, ಆದರೆ ದಿಗ್ವಿಜಯ್ ಸಿಂಗ್ ಅವರ ಹಕ್ಕು ಪ್ರಬಲವಾಗಿದೆ ಎಂದು ಪರಿಗಣಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ದಿಗ್ವಿಜಯ್ ಸಿಂಗ್ ರಾಜಕೀಯ ಪಯಣ:ದಿಗ್ವಿಜಯ್ ಸಿಂಗ್ ಅವರ ರಾಜಕೀಯ ಪಯಣ ಗುನಾದಿಂದ ಆರಂಭಗೊಂಡಿದೆ. ದಿಗ್ವಿಜಯ್ ಸಿಂಗ್ ತಮ್ಮ ಹುಟ್ಟೂರಾದ ರಾಘೋಗಢದಲ್ಲಿ 1969-71ರವರೆಗೆ ಪುರಸಭೆ ಅಧ್ಯಕ್ಷರಾಗಿದ್ದರು. ಇದರ ನಂತರ, ಅವರು 1977-84ರ ಅವಧಿಯಲ್ಲಿ ರಾಘೋಗಢ ವಿಧಾನಸಭೆಯಿಂದ ಕಾಂಗ್ರೆಸ್ ಶಾಸಕರಾದರು. 1984-89 ಮತ್ತು 1991-94ರಲ್ಲಿ ಸಂಸದರಾಗಿ ಆಯ್ಕೆಯಾದ ದಿಗ್ವಿಜಯ್ ಸಿಂಗ್ ನಂತರ 1993-2003ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಪ್ರಸ್ತುತ, ಅವರು 2014 ರಿಂದ ಇಲ್ಲಿಯವರೆಗೆ ರಾಜ್ಯಸಭಾ ಸಂಸದರಾಗಿದ್ದಾರೆ.
ದಿಗ್ವಿಜಯ್ ಸಿಂಗ್ ಕುಟುಂಬ ರಾಜಕೀಯ:ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ರಘೋಘರ್ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ರೆ, ದಿಗ್ವಿಜಯ್ ಸಿಂಗ್ ಅವರ ಕಿರಿಯ ಸಹೋದರ ಲಕ್ಷ್ಮಣ್ ಸಿಂಗ್ ಚಾಚೋಡಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಹೆಸರು ಮುಂಚೂಣಿ:ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ತಿಂಗಳು ನಡೆಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಗೆಹ್ಲೋಟ್ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ ಎಂದು ಮೂಲಗಳು ಹೇಳಿವೆ. ಹೈಕಮಾಂಡ್ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಶಿರಸಾ ಪಾಲಿಸುವೆ ಎಂಬ ಮಾಹಿತಿಯನ್ನು ಬಹಳ ಹಿಂದೆಯೇ ಖರ್ಗೆ ಅವರು ಸೋನಿಯಾಗೆ ತಿಳಿಸಿರುವುದನ್ನು ಗಮನಿಸಬಹುದು. ಹೀಗಾಗಿ ಸೋನಿಯಾ ಅವರು ಖರ್ಗೆ ಅವರನ್ನೇ ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಕೊನೆಯದಾಗಿ ಪಕ್ಷ ಖರ್ಗೆಗೆ ಏನು ಹೇಳುತ್ತದೆಯೋ ಅದನ್ನು ಅವರು ಮಾಡುತ್ತಾರೆ ಎಂದು ಖರ್ಗೆ ಅವರ ಆಪ್ತರೊಬ್ಬರು ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಒಂದು ವೇಳೆ ಸೋನಿಯಾ ಸೂಚಿಸಿದರೆ ಅದಕ್ಕೆ ಖರ್ಗೆ ನಿರಾಕರಿಸುವುದಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಂತಹ ವಿರೋಧ ಪಕ್ಷಗಳ ನಾಯಕರ ಜತೆ ಉತ್ತಮ ಸಂಪರ್ಕ ಹಾಗೂ ಸಂಬಂಧ ಇರಿಸಿಕೊಂಡಿದ್ದಾರೆ. ಖರ್ಗೆ ಅವರ ಬದ್ಧತೆ ಮತ್ತು ಕಾರ್ಯವೈಖರಿಯು ಪಕ್ಷಕ್ಕೆ ಇನ್ನಷ್ಟು ಲಾಭ ಉಂಟುಮಾಡಲಿದೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಖರ್ಗೆ ಅವರು ಚೆನ್ನಾಗಿ ಹಿಂದಿ ಭಾಷೆಯನ್ನು ಬಲ್ಲವರಾಗಿದ್ದಾರೆ. ಹೀಗಾಗಿ ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಕೂಡ ಅವರು ಅಭಿಮಾನಿ ವರ್ಗವನ್ನು ಹೊಂದಿದ್ದಾರೆ ಎಂದು ಮತ್ತೊಬ್ಬ ನಾಯಕ ಖರ್ಗೆ ಬಗ್ಗೆ ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಪಟ್ಟು ಹಿಡಿದಿದ್ದಾರೆ. ದೇಶಾದ್ಯಂತ ಪ್ರಭಾವ ಹೊಂದಿರುವ ನೆಹರೂ-ಗಾಂಧಿ ಕುಟುಂಬ ಮಾತ್ರವೇ ಪಕ್ಷದತ್ತ ಜನರನ್ನು ಸೆಳೆಯುವ ವರ್ಚಸ್ಸು ಹಾಗೂ ಶಕ್ತಿ ಹೊಂದಿದ್ದಾರೆ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಇಂದು ಮಲ್ಲಿಕಾರ್ಜುನ್ ಖರ್ಗೆ ಸಹ ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ತಿಳಿದುಬಂದಿದೆ.
ಇಂದು ಮಧ್ಯಾಹ್ನದೊಳಗೆ ನಾನು ನಾಮಪತ್ರ ಸಲ್ಲಿಸುತ್ತೇನೆ. ನಾವೆಲ್ಲರೂ ಒಂದೇ ಸಿದ್ಧಾಂತವನ್ನು ಹಂಚಿಕೊಳ್ಳುತ್ತೇವೆ, ಪಕ್ಷವನ್ನು ಬಲಪಡಿಸಬೇಕೆಂದು ಬಯಸುತ್ತೇವೆ. ಇದೊಂದು ಸೌಹಾರ್ದ ಸ್ಪರ್ಧೆ, ಯಾವುದೇ ಪೈಪೋಟಿ ಇಲ್ಲ ಅಂತಾ ಶಶಿ ತರೂರ್ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ನಾಮಪತ್ರ ಸಲ್ಲಿಕೆ ಬಳಿಕ ಯಾವೆಲ್ಲ ನಾಯಕರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.
ಓದಿ:24 ವರ್ಷಗಳ ನಂತರ ಕಾಂಗ್ರೆಸ್‌ಗೆ ಗಾಂಧಿಯೇತರ ಅಧ್ಯಕ್ಷ ನಿಶ್ಚಿತ: ಆದರೆ, ಪ್ರಭಾವ - ಹಿಡಿತ ಯಾರ 'ಕೈ'ಯಲ್ಲಿ?