ನವದೆಹಲಿ: ಕೋಮುವಾದದ ಮುಖವಾಡ ಧರಿಸಿ ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇಂದು ಅಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ ಎಂದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬೆದರಿಕೆವೊಡ್ಡಿರುವ ಶಕ್ತಿಗಳು ಹಾಗೂ ವಿನಾಶಕಾರಿ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ ಎಂದ ಅವರು, ಬೆಲೆ ಏರಿಕೆ, ನಿರುದ್ಯೋಗ, ಜನರ ನಡುವೆ ಕಂದಕಗಳನ್ನು ಸೃಷ್ಟಿಸುತ್ತಿರುವ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಭಾಗಿಯಾಗಬೇಕೆಂದು ಮನವಿ ಮಾಡಿದರು.
ಇದೇ ವೇಳೆ ನಿರ್ಗಮಿತ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನಾಯಕತ್ವವನ್ನು ಹೊಗಳಿದ ಖರ್ಗೆ, ಸೋನಿಯಾ ಅವರ ಅಧಿಕಾರಾವಧಿ ಸದಾ ಕಾಲ ನೆನಪಿನಲ್ಲಿರುತ್ತದೆ. 23 ವರ್ಷಗಳ ಕಾಲ ಸೋನಿಯಾ ಪಕ್ಷ ಮುನ್ನಡೆಸಿದ್ದರು ಹಾಗೂ ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಜೊತೆಗೆ ನನ್ನ ಸಹಪಾಠಿ ಶಶಿ ತರೂರ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷವನ್ನು ಮುನ್ನಡೆಸುವ ಬಗ್ಗೆ ನಾನು ತರೂರ್ ಚರ್ಚಿಸಿದ್ದೇವೆ ಎಂದರು.
ಖರ್ಗೆ ಗೆಲುವು ಕಾಂಗ್ರೆಸ್ ಗೆಲುವು: ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಶಿ ತರೂರ್ ಮಾತನಾಡಿ, ಖರ್ಗೆ ಅವರ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವೆಂದು ನಾವು ಪರಿಗಣಿಸಬೇಕು. ಈ ಚುನಾವಣೆಯು ವ್ಯಕ್ತಿಯ ಚುನಾವಣೆಯಾಗಿರಲಿಲ್ಲ. ಇದು ಪಕ್ಷದ ಚುನಾವಣೆಯಾಗಿತ್ತು. ನಾನು ಯಾವಾಗಲೂ ಪಕ್ಷದ ಬಲವರ್ಧನೆಯನ್ನೇ ಬಯಸುತ್ತೇನೆ. ಯಾಕೆಂದರೆ ದೇಶಕ್ಕೆ ಬಲಿಷ್ಠವಾದ ಕಾಂಗ್ರೆಸ್ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.