ನವದೆಹಲಿ: ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನ ಕಾಂಗ್ರೆಸ್ನಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ಎಲ್ಲ ನಾಯಕರು ಒಟ್ಟಾಗಿ ಹೋರಾಡಲಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ. 200 ಸ್ಥಾನಗಳ ರಾಜಸ್ಥಾನ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.
ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ರಾಜಸ್ಥಾನವನ್ನು ಮತ್ತೆ ಗೆಲ್ಲಲಿದ್ದೇವೆ ಎಂದು ಪಕ್ಷದ ಸಂಘಟನಾ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಇಂದು ನಡೆದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಎಐಸಿಸಿ ಮತ್ತು ಹಿರಿಯ ರಾಜ್ಯ ನಾಯಕರೊಂದಿಗೆ ನಾಲ್ಕು ಗಂಟೆಗಳ ಕಾಲ ಪಕ್ಷದ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ ಈ ಹೇಳಿಕೆ ಬಂದಿದೆ.
ರಾಜಸ್ಥಾನದ ಚುನಾವಣೆಗೆ ಬಗ್ಗೆ ಕಾಂಗ್ರೆಸ್ ನಾಯಕತ್ವ ಎರಡು ವಿಷಯಗಳ ಬಗ್ಗೆ ಪ್ರಮುಖವಾಗಿ ಗಮನ ಹರಿಸಿದೆ. ಮೊದಲನೆಯದ್ದು ಪ್ರತಿ ಐದು ವರ್ಷಗಳಿಗೊಮ್ಮೆ ರಾಜ್ಯದಲ್ಲಿ ಸರ್ಕಾರವನ್ನು ಬದಲಾಯಿಸುವ ಸಂಪ್ರದಾಯವನ್ನು ಹೇಗೆ ಮುರಿಯುವುದು ಹಾಗೂ ಎರಡನೆಯದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ನಡುವಿನ ಸಾರ್ವಜನಿಕವಾದ ಕಿತ್ತಾಟವನ್ನು ಕೊನೆಗೊಳಿಸುವ ಕುರಿತು ಸಮಾಲೋಚಿಸಿದೆ.
ಪಕ್ಷದ ಒಳಗಿನವರ ಪ್ರಕಾರ, ಗೆಹ್ಲೋಟ್ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳು ಐದು ವರ್ಷಗಳಿಗೊಮ್ಮೆ ಮತದಾರರು ಸರ್ಕಾರವನ್ನು ಬದಲಾಯಿಸುವ ಸಂಪ್ರದಾಯವನ್ನು ಮುರಿಯಲು ಕಾಂಗ್ರೆಸ್‌ಗೆ ಸಹಾಯ ಮಾಡುತ್ತವೆ. ಅಲ್ಲದೇ, ಇತ್ತೀಚೆಗೆ ಮುಖ್ಯಮಂತ್ರಿ ಮಾಡಿದ ಘೋಷಣೆಯು ಬಿಜೆಪಿ ನಾಯಕಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಒಳಗೊಂಡಿರುವ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಖ್ಯಾತಿಯನ್ನು ಕಳೆದುಕೊಂಡಿರುವ ರಾಜಸ್ಥಾನ ಲೋಕ ಸೇವಾ ಆಯೋಗ ಪುನರುಜ್ಜೀವನಗೊಳಿಸುವಂತೆ ಒತ್ತಾಯಿಸುತ್ತಿದ್ದ ಪೈಲಟ್ ಅವರಿಗೆ ಸಮಾಧಾನ ತಂದಿದೆ.
ಈ ಬಗ್ಗೆ ವೇಣುಗೋಪಾಲ್ ಪ್ರತಿಕ್ರಿಯಿಸಿ, ಆರ್ಪಿಎಸ್ಸಿ ಸಮಸ್ಯೆಯನ್ನು ಪರಿಹರಿಸಲಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಪರೀಕ್ಷೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಲು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪೈಲಟ್ ಶಾಂತ:ಇಂದಿನ ಹೈಕಮಾಂಡ್ ಸಭೆಯಲ್ಲಿ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡೆಯ ಬಗ್ಗೆ ಶಾಂತವಾಗಿದ್ದರು ಎಂದು ಪಕ್ಷದ ಒಳಗಿನವರ ತಿಳಿಸಿದ್ದಾರೆ. ಗೆಹ್ಲೋಟ್ ತಮ್ಮ ಕಾಲುಗಳಿಗೆ ಗಾಯವಾಗಿದ್ದರಿಂದ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಆದ ಕಾರಣ ಆನ್‌ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ, ಗೆಹ್ಲೋಟ್ - ಪೈಲಟ್ ಜಗಳ ಬಗೆಹರಿದಿದೆ ಎಂದು ಪಕ್ಷದ ಒಳಗಿನವರು ಹೇಳಿಕೊಂಡರು ಸಹ ಕಳೆದ ಕೆಲ ತಿಂಗಳಲ್ಲಿ ನಡೆದ ಇಬ್ಬರ ನಡುವಿನ ಸಮಸ್ಯೆಯು ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂಬುವುದನ್ನು ನಾಯಕತ್ವ ಅರಿತುಕೊಂಡಿದೆ. ಅದರಂತೆ ಸಾರ್ವಜನಿಕವಾಗಿ ಕಿತ್ತಾಟ ತಪ್ಪಿಸಿ ಪಕ್ಷದ ವೇದಿಕೆಗಳಲ್ಲಿ ಮಾತ್ರ ತಮ್ಮ ಸಮಸ್ಯೆಗಳನ್ನು ವ್ಯಕ್ತಪಡಿಸುವಂತೆ ಎಐಸಿಸಿ ಎಲ್ಲ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.
ಪಕ್ಷದಲ್ಲಿ ಕಟ್ಟುನಿಟ್ಟಿನ ಶಿಸ್ತು ಅಗತ್ಯ: ಯಾರಾದರೂ ಪಕ್ಷದ ನಿರ್ದೇಶನವನ್ನು ಉಲ್ಲಂಘಿಸುವುದು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಕ್ಷದಲ್ಲಿ ಕಟ್ಟುನಿಟ್ಟಿನ ಶಿಸ್ತು ಇರಬೇಕು. ಸಾರ್ವಜನಿಕವಾಗಿ ಪರಸ್ಪರರ ವಿರುದ್ಧ ಹೇಳಿಕೆ ಮಾಡಬಾರದು. ಅದಕ್ಕಾಗಿ ಪಕ್ಷದ ವೇದಿಕೆಗಳಿವೆ. ಇಂದಿನ ಸಭೆ ನಿರ್ಣಾಯಕ ಮತ್ತು ಯಶಸ್ವಿಯಾಗಿದೆ. ಇದು ನಾಯಕರ ನಡುವೆ ಒಗ್ಗಟ್ಟನ್ನು ಕಂಡಿದೆ ಮತ್ತು ಎಲ್ಲರೂ ಕಾಂಗ್ರೆಸ್ ರಾಜಸ್ಥಾನವನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದೂ ವೇಣುಗೋಪಾಲ್ ತಿಳಿಸಿದ್ದಾರೆ.