ನವ ರಾಯಪುರ (ಛತ್ತೀಸ್‌ಗಢ): ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಸುಳಿವು ನೀಡಿದ್ದಾರೆ. ಛತ್ತೀಸ್‌ಗಢದ ರಾಯಪುರದಲ್ಲಿ ನಡೆದ 85ನೇ ಸರ್ವ ಸದಸ್ಯರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ''ಭಾರತ್ ಜೋಡೋ ಯಾತ್ರೆ"ಯೊಂದಿಗೆ ನನ್ನ ಇನ್ನಿಂಗ್ಸ್ ಕೊನೆಗೊಂಡಿದ್ದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.
ಇಂದು ಎರಡನೇ ದಿನದ ಅಧಿವೇಶನದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, 2004 ಮತ್ತು 2009ರಲ್ಲಿ ಪಕ್ಷದ ಗೆಲುವು ಮತ್ತು ಡಾ.ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವವು ನನಗೆ ವೈಯಕ್ತಿಕ ತೃಪ್ತಿಯನ್ನು ನೀಡಿತ್ತು. ಆದರೆ, ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯವಾಗಿರುವುದಕ್ಕೆ ನನಗೆ ಹೆಚ್ಚು ಖುಷಿ ಕೊಟ್ಟಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಮಹತ್ವದ ತಿರುವು ನೀಡಿದೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ, ಬಿಜೆಪಿಯು ದ್ವೇಷದ ಬೆಂಕಿಗೆ ತುಪ್ಪವಾಗಿದೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು ಮತ್ತು ಬುಡಕಟ್ಟು ಜನರನ್ನು ಬಿಜೆಪಿ ಸರ್ಕಾರ ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸುತ್ತಿದೆ. ನಿರ್ದಿಷ್ಟ ಉದ್ಯಮಿಗೆ ಅನುಕೂಲ ಮಾಡಿಕೊಡುವ ಮೂಲಕ ಈ ಸರ್ಕಾರವು ಆರ್ಥಿಕ ನಾಶಕ್ಕೆ ಕಾರಣವಾಗಿದೆ ಎಂದು ಪರೋಕ್ಷವಾಗಿ ಗೌತಮ್ ಅದಾನಿ ವಿಷಯ ಕುರಿತಾಗಿ ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ:ಗುಲಾಬಿ ಹೂವು ಹಾಸಿನ ಮೂಲಕ ಪ್ರಿಯಾಂಕಾ ಗಾಂಧಿಗೆ ಅದ್ಧೂರಿ ಸ್ವಾಗತ..
ಈ ನಿರ್ಣಾಯಕ ಸನ್ನಿವೇಶದಲ್ಲಿ ದೇಶ ಮತ್ತು ಪಕ್ಷದ ಬಗ್ಗೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಶೇಷ ಜವಾಬ್ದಾರಿ ಇದೆ. ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ. ಇದು ಎಲ್ಲ ಧರ್ಮ, ಜಾತಿ ಮತ್ತು ಲಿಂಗಗಳ ಜನರ ಧ್ವನಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಅವರೆಲ್ಲರ ಕನಸನ್ನು ಪಕ್ಷವು ನನಸಾಗಿಸುತ್ತದೆ ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದರು.
ಮುಂದುವರೆದು, ಕಾಂಗ್ರೆಸ್ ಮತ್ತು ವಿಶೇಷವಾಗಿ ದೇಶಕ್ಕೆ ಇದು ಸವಾಲಿನ ಸಮಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪ್ರತಿಯೊಂದು ಸಂಸ್ಥೆಯನ್ನು ತನ್ನ ಕಪಿ ಮುಷ್ಠಿಯಲ್ಲಿ ಇರಿಸಿಕೊಂಡಿದೆ. ಬಿಜೆಪಿ ದ್ವೇಷದ ಬೆಂಕಿಯನ್ನು ಹೊತ್ತಿಸುತ್ತಿದೆ. ಬಿಜೆಪಿ ಸರ್ಕಾರದ ಕ್ರಮಗಳು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಧಿಕ್ಕರಿಸುವುದನ್ನು ತೋರಿಸುತ್ತವೆ ಎಂದು ಆರೋಪಿಸಿದರು.
ಇಂದಿನ ಪರಿಸ್ಥಿತಿಯು ನಾನು ಮೊದಲು ಸಂಸತ್ತಿಗೆ ಪ್ರವೇಶಿಸಿದ ಸಮಯವನ್ನು ನೆನಪಿಸುತ್ತದೆ ಎಂದು ಹೇಳಿದ ಸೋನಿಯಾ, 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಯನ್ನು ಸಾಧಿಸಬೇಕು. ಈ ಕೆಟ್ಟ ಆಡಳಿತವನ್ನು ಹುರುಪಿನಿಂದ ಎದುರಿಸಬೇಕು. ನಾವು ಜನರನ್ನು ತಲುಪಿ, ನಮ್ಮ ಸಂದೇಶವನ್ನು ಸ್ಪಷ್ಟತೆಯಿಂದ ತಿಳಿಸಬೇಕು. ನಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಬದಿಗಿಡಲು ನಾವು ಸಿದ್ಧರಾಗಿರಬೇಕು ಎಂದು ಸೋನಿಯಾ ಗಾಂಧಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಇದನ್ನೂ ಓದಿ:ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗಿದ್ದೇನೆ, ವೀರಶೈವ ಲಿಂಗಾಯತರು ಅಪಾರ್ಥ ಮಾಡಿಕೊಳ್ಳಬೇಡಿ: ಬಿಎಸ್ವೈ