ಹೈದರಾಬಾದ್/ರಾಯಪುರ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಉಸ್ತುವಾರಿ ಸಮಿತಿ ಸಭೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಆರಂಭವಾಗಿದೆ. ಪಕ್ಷದ 85 ನೇ ಅಧಿವೇಶನಕ್ಕೆ ಖರ್ಗೆ ಚಾಲನೆ ನೀಡಲಿದ್ದು, ಫೆ.26 ರಂದು ಸಂಜೆ ಸಾರ್ವಜನಿಕ ಸಭೆಯೊಂದಿಗೆ ಈ ಅಧಿವೇಶನ ಮುಕ್ತಾಯಗೊಳ್ಳಲಿದೆ.
2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಕಾಂಗ್ರೆಸ್ ಅಖಾಡಕ್ಕೆ ಇಳಿದಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ದೇಶದ ಜನರ ಗಮನ ಸೆಳೆಯುತ್ತಿದ್ದು, ಮೋದಿ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸಲು ಮುಂದಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರಮುಖ ರಾಜ್ಯಗಳನ್ನು ಗೆಲ್ಲುವುದು ಕಾಂಗ್ರೆಸ್ನ ಬಹುಮುಖ್ಯ ಗುರಿ ಹಾಗೂ ಉದ್ದೇಶವಾಗಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೇಂದ್ರದಲ್ಲಿ ಪಕ್ಷದ ಪುನರುಜ್ಜೀವನ ಮಾಡುವುದು ಕಾಂಗ್ರೆಸ್ನ ಮೊದಲ ಆದ್ಯತೆಯೂ ಆಗಿದೆ. ಈ ನಿಟ್ಟಿನಲ್ಲಿ ಪಕ್ಷ ಎಲ್ಲ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಪಕ್ಷವು ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ, ಕಾಂಗ್ರೆಸ್ ತನ್ನದೇ ಸ್ವಂತ ಬಲದಿಂದ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಹಿಮಾಚಲ ಪ್ರದೇಶ ಮತ್ತು ಚುನಾವಣೆಗೆ ಒಳಪಡುವ ರಾಜ್ಯಗಳಾದ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಈಗ ಅಧಿಕಾರ ನಡೆಸುತ್ತಿದೆ. ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದೆ.
ಸ್ಟೀರಿಂಗ್ ಕಮಿಟಿಯಿಂದ ಮಹತ್ವದ ನಿರ್ಧಾರ ಸಾಧ್ಯತೆ:ವಿಸರ್ಜಿಸಲ್ಪಟ್ಟಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಿಡಬ್ಲ್ಯೂಸಿ ಪಾತ್ರವನ್ನು ನಿರ್ವಹಿಸುತ್ತಿರುವ ಸ್ಟೀರಿಂಗ್ ಕಮಿಟಿಯು ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯನ್ನು ಹೇಗೆ ಪುನರುಜ್ಜೀವನಗೊಳಿಸಬೇಕು ಎಂಬ ಬಗ್ಗೆ ಬಹು ಮುಖ್ಯವಾದ ಚರ್ಚೆ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಟೀರಿಂಗ್ ಸಮಿತಿಯ ಸದಸ್ಯರಾಗಿದ್ದಾರೆ. ಸ್ಟೀರಿಂಗ್ ಕಮಿಟಿಯಲ್ಲಿ ಅವರ ಭಾಗವಹಿಸುವಿಕೆ ಇನ್ನೂ ದೃಢಪಟ್ಟಿಲ್ಲ.
ಸಿಡಬ್ಲ್ಯೂಸಿಗೆ ಚುನಾವಣೆ ನಡೆಸಲು ಒತ್ತಾಯ: ಪಿ ಚಿದಂಬರಂ ಅವರಂತಹ ಹಿರಿಯ ನಾಯಕರು ಸಿಡಬ್ಲ್ಯೂಸಿಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮತ್ತು ಎಐಸಿಸಿ ಸಂವಿಧಾನದ ಅಡಿ ಚುನಾವಣೆಗಳನ್ನು ನಡೆಸಲು ಒತ್ತಾಯ ಮಾಡಿದ್ದಾರೆ. ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಗೆ ಕಿರಿಯ ನಾಯಕರನ್ನು ಸೇರಿಸಿಕೊಳ್ಳಲು ಹಲವರು ಸಲಹೆ ನೀಡಿದ್ದಾರೆ. ಪಕ್ಷದ ಸಂವಿಧಾನವು ಕಾರ್ಯಕಾರಿ ಸಮಿತಿಯು, ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರು ಮತ್ತು ಇತರ 23 ಸದಸ್ಯರನ್ನು ಒಳಗೊಂಡಿರಬೇಕು ಎಂದು ಸೂಚಿಸುತ್ತದೆ. ಈ 23ರಲ್ಲಿ ಪಕ್ಷದ ಮುಖ್ಯಸ್ಥರು 11 ಮಂದಿಯನ್ನು ನೇಮಕ ಮಾಡಲಿದ್ದು, ಉಳಿದ 12 ಸದಸ್ಯರನ್ನು ಎಐಸಿಸಿ ಆಯ್ಕೆ ಮಾಡಬೇಕಿದೆ.
ಸಿಡಬ್ಲ್ಯೂಸಿ ಚುನಾವಣೆಗೆ ಸಿದ್ಧ: ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಈ ಬಗ್ಗೆ ಪಕ್ಷದ ಎಲ್ಲ ನಾಯಕರು ಒಕ್ಕೋರಲಿನ ತೀರ್ಮಾನ ಕೈಗೊಂಡರೆ, ಸಿಡಬ್ಲ್ಯೂಸಿ ಚುನಾವಣೆಯನ್ನು ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ ಏಕೈಕ ಪಕ್ಷ ಕಾಂಗ್ರೆಸ್ ಮತ್ತು ಈ ಹಿಂದೆಯೂ ಸಿಡಬ್ಲ್ಯೂಸಿಗೆ ಚುನಾವಣೆಗಳು ನಡೆದಿವೆ ಎಂದು ಅವರು ಹೇಳಿದರು. ಪಕ್ಷದ ಹುದ್ದೆಗಳಿಗೆ ಚುನಾವಣೆ ನಡೆಸುವ ಯಾವುದೇ ರಾಜಕೀಯ ಪಕ್ಷವಿಲ್ಲ ಮತ್ತು ಕಳೆದ 22 ವರ್ಷಗಳಲ್ಲಿ ಆಂತರಿಕ ಚುನಾವಣೆ ನಡೆಸಲು ನಿಷ್ಪಕ್ಷಪಾತ ಚುನಾವಣಾ ಸಂಸ್ಥೆಯನ್ನು ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಜೈರಾಂ ರಮೇಶ್ ಪ್ರತಿಪಾದಿಸಿದ್ದಾರೆ.
ಈವೆಂಟ್ ವೇಳಾಪಟ್ಟಿ: ಮೊದಲ ದಿನ ಅಂದರೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸ್ಟೀರಿಂಗ್ ಸಮಿತಿಯು ಸಭೆ ಸೇರುತ್ತದೆ. ಸಂಜೆ 4 ಗಂಟೆಗೆ ವಿಷಯಗಳ ಸಮಿತಿ ಸಭೆ ನಡೆಯಲಿದೆ. ಇದು ಪರಿಗಣನೆಗೆ ಆರು ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ. ಫೆ.25 ಮತ್ತು ಫೆ.26ರಂದು ಈ ನಿರ್ಣಯಗಳ ಕುರಿತು ಚರ್ಚೆ ನಡೆಯಲಿದ್ದು, ಫೆ.25ರಂದು ರಾಜಕೀಯ, ಆರ್ಥಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಸಂಬಂಧಿಸಿದ ನಿರ್ಣಯಗಳು: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಫೆ.26ರಂದು ಯುವಜನತೆ, ಉದ್ಯೋಗ ಮತ್ತು ಶಿಕ್ಷಣದ ಕುರಿತು ಚರ್ಚೆ ನಡೆಯಲಿದ್ದು, ಕೊನೆಯ ದಿನ ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷರು ಸರ್ವಸದಸ್ಯರನ್ನು ಉದ್ದೇಶಿಸಿ ಮತ್ತು ಸಂಜೆ 4 ಗಂಟೆಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನು ಓದಿ:ಬಂಧನದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಮಧ್ಯಂತರ ಜಾಮೀನು