ನವದೆಹಲಿ:ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂಬ ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳು ಪಕ್ಷದಲ್ಲಿ ಹುಮ್ಮಸ್ಸು ಹೆಚ್ಚಿಸಿವೆ. ಇದೀಗ ನೆರೆಯ ಒಡಿಶಾದಲ್ಲಿ ಪಕ್ಷದ ಪುನಶ್ಚೇತನಕ್ಕೆ ಕಾರ್ಯತಂತ್ರ ರೂಪಿಸಲು ಪಕ್ಷದ ಉನ್ನತ ನಾಯಕರು ಸಜ್ಜಾಗಿದ್ದಾರೆ. ಬಿಜೆಡಿ ಆಡಳಿತ ಹಾಗೂ ಬಿಜೆಪಿ ಪ್ರತಿಪಕ್ಷದಲ್ಲಿರುವ ರಾಜ್ಯದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಹೊಂದಿದೆ.
ತೆಲಂಗಾಣದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರದ ನೇತೃತ್ವವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಹಿಸಿದ್ದರು. ಒಡಿಶಾದಲ್ಲಿ ಇದೇ ತಿಂಗಳಿಂದ ಕಾಂಗ್ರೆಸ್ ತನ್ನ ಚಟುವಟಿಕೆಗಳಿಗೆ ಚಾಲನೆ ನೀಡಲು ತೀರ್ಮಾನಿಸಿದೆ. ಅದರಂತೆ, ಪಶ್ಚಿಮ ಒಡಿಶಾದಲ್ಲಿ ರಾಹುಲ್ ಗಾಂಧಿ ಅವರ ಪ್ರಮುಖ ಸಾರ್ವಜನಿಕ ಸಭೆಗಳನ್ನು ಪಕ್ಷ ಯೋಜಿಸುತ್ತಿದೆ. ಜೊತೆಗೆ ಪಕ್ಷದ ಅಧ್ಯಕ್ಷ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.
ಶೀಘ್ರವೇ ಖರ್ಗೆ, ರಾಹುಲ್, ಪ್ರಿಯಾಂಕಾ ರ‍್ಯಾಲಿ:''ಎಕ್ಸಿಟ್ ಪೋಲ್‌ಗಳ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್ ಗಮನಾರ್ಹ ಪುನರಾಗಮನವನ್ನು ಮಾಡುವ ಸಾಧ್ಯತೆಯಿದೆ. ತೆಲಂಗಾಣದಲ್ಲಿ ಪಕ್ಷವು ಗೆದ್ದರೆ, ಇದರ ಖಂಡಿತವಾಗಿಯೂ ಒಡಿಶಾ ಮತ್ತು ಅದರಾಚೆಗಿನ ಗಡಿ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಒಡಿಶಾ ಪಕ್ಷಕ್ಕೆ ಫಲವತ್ತಾದ ನೆಲ ಎಂದು ನಾವು ನಂಬಿದ್ದೇವೆ. ನಾವು ಆಕ್ರಮಣಕಾರಿ ಪ್ರಚಾರವನ್ನು ಪ್ರಾರಂಭಿಸಿದರೆ, ಪುನರುಜ್ಜೀವನ ಸಾಧ್ಯ'' ಎಂದು ಒಡಿಶಾದ ಎಐಸಿಸಿ ಉಸ್ತುವಾರಿ ಚೆಲ್ಲಕುಮಾರ್ 'ಈಟಿವಿ ಭಾರತ್'ಗೆ ತಿಳಿಸಿದರು.
''ನಾವು ಡಿಸೆಂಬರ್‌ನಲ್ಲಿ ಒಡಿಶಾದ ಪಶ್ಚಿಮ ಭಾಗಗಳಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲು ಬೃಹತ್ ರ‍್ಯಾಲಿಯನ್ನು ಯೋಜಿಸುತ್ತಿದ್ದೇವೆ. ಈ ಭಾಗದಲ್ಲಿ ಕಾಂಗ್ರೆಸ್ ಇನ್ನೂ ಸಾಕಷ್ಟು ನೆಲಮಟ್ಟದ ಅಸ್ತಿತ್ವವನ್ನು ಹೊಂದಿದೆ. ಈ ರ‍್ಯಾಲಿಯು ಕೊರಾಪುಟ್ ಅಥವಾ ಸಮೀಪದ ಸ್ಥಳದಲ್ಲಿ ನಡೆಯಬಹುದು. ಅಲ್ಲದೇ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಪ್ರತ್ಯೇಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವಂತೆ ಮನವಿ ಮಾಡಿದ್ದೇವೆ. ಈ ತಿಂಗಳು ಸರಣಿಯಾಗಿ ಮೂರು ಪ್ರಮುಖ ನಾಯಕರ ರ‍್ಯಾಲಿಗಳನ್ನು ನಡೆಸಲು ನಾವು ಯೋಜಿಸಿದ್ದೇವೆ. ಅದು ನಮಗೆ ದೊಡ್ಡ ಆರಂಭ ಒದಗಲಿದೆ'' ಎಂದು ಅವರು ಹೇಳಿದರು.
ಎಐಸಿಸಿ ಉಸ್ತುವಾರಿ ಪ್ರಕಾರ, ರಾಹುಲ್ ಅವರ ರ‍್ಯಾಲಿಯು 2024ರ ಲೋಕಸಭಾ ಚುನಾವಣೆಗೆ ರಾಜ್ಯ ಘಟಕವನ್ನು ಸಜ್ಜುಗೊಳಿಸುವುದರೊಂದಿಗೆ ಬಿಜೆಡಿ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು, ಆಂದೋಲನ ರೀತಿಯ ಕಾರ್ಯಕ್ರಮಗಳ ಪ್ರಾರಂಭಕ್ಕೆ ವೇದಿಕೆಯಾಗಲಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಸರ್ಕಾರವನ್ನು ನಡೆಸಲು ಅಧಿಕಾರಶಾಹಿಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ಜಿಲ್ಲಾ ಮತ್ತು ತಹಸೀಲ್ ಮಟ್ಟದ ಅಧಿಕಾರಿಗಳು ಬಿಜೆಡಿಯ ಪದಾಧಿಕಾರಿಗಳಂತೆ ವರ್ತಿಸುತ್ತಾರೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ.