ನವದೆಹಲಿ :ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೆಲಂಗಾಣ ಹೊರತುಪಡಿಸಿ ಇತರ ಮೂರು ರಾಜ್ಯಗಳಲ್ಲಿ ಸೋಲು ಕಂಡಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದು, ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಪಕ್ಷ ಪ್ರದರ್ಶನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿನ ಜನಾದೇಶವನ್ನು ವಿನಯದಿಂದ ಸ್ವೀಕರಿಸುತ್ತೇವೆ. ನಮ್ಮ ಸಿದ್ಧಾಂತದ ಹೋರಾಟವನ್ನು ಮುಂದುವರಿಸುತ್ತೇವೆ. ತೆಲಂಗಾಣ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರಜಲ ತೆಲಂಗಾಣ ಮಾಡುವ ಭರವಸೆಯನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. ಚುನಾವಣೆಗೆ ಶ್ರಮಿಸಿದ ಹಾಗೂ ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ತೆಲಂಗಾಣ ಜನತೆಯಿಂದ ಜನಾದೇಶ ಪಡೆದಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಜೊತೆಗೆ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಮಗೆ ಮತ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಈ ಮೂರು ರಾಜ್ಯಗಳಲ್ಲಿ ನಮ್ಮ ಸಾಧನೆ ನಿರಾಶದಾಯಕವಾಗಿರುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಅದೇ ಸಂಕಲ್ಪದೊಂದಿಗೆ, ಮತ್ತೆ ಈ ಮೂರು ರಾಜ್ಯಗಳಲ್ಲಿ ನಮ್ಮನ್ನು ಪುನರ್ ನಿರ್ಮಿಸಲು ಮತ್ತು ಪುನರುಜ್ಜೀವನಗೊಳಿಸುವ ನಮ್ಮ ಬಲವಾದ ಸಂಕಲ್ಪದೊಂದಿಗೆ ಮುನ್ನಡೆಯುತ್ತೇವೆ.