ನವದೆಹಲಿ:ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ಲಾಲ್ ನೆಹರೂ ಅವರ 132ನೇ ಜನ್ಮದಿನದ ((Nehru Birth Anniversary) ಅಂಗವಾಗಿ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಶಾಂತಿವನದಲ್ಲಿರುವ ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress President Sonia Gandhi) ಪುಷ್ಪನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೂಡ ತಮ್ಮ ಟ್ವಟರ್ ಖಾತೆಯಲ್ಲಿ ನೆಹರೂ ಅವರಿಗೆ ಗೌರವ ಸೂಚಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Congress Leader Rahul Gandhi) ತಮ್ಮ ಮುತ್ತಾತನಿಗೆ ನಮಿಸಿದ್ದು, ಮಕ್ಕಳೊಂದಿಗೆ ನೆಹರೂ ಇರುವ ಪೋಟೋವೊಂದನ್ನು ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, "ನಮಗೆ ಬೇಕಾಗಿರುವುದು ಶಾಂತಿಯ ಪೀಳಿಗೆ" ಎಂಬ ಜವಾಹರ್ಲಾಲ್ ನೆಹರೂ ಅವರ ಮಾತನ್ನು ಉಲ್ಲೇಖಿಸಿ, ಸತ್ಯ, ಏಕತೆ ಮತ್ತು ಶಾಂತಿಯನ್ನು ಹೆಚ್ಚು ಗೌರವಿಸಿದ ಭಾರತದ ಮೊದಲ ಪ್ರಧಾನಿಯನ್ನು ಸ್ಮರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಹೊಲದಲ್ಲಿ ನೇಗಿಲು ಹಿಡಿದ ರೈತನೊಂದಿಗೆ ನೆಹರೂ ಇರುವ ಫೋಟೋವೊಂದನ್ನು ಟ್ವಿಟರ್ ಖಾತೆಯಲ್ಲಿ ಕೈ ನಾಯಕಿ ಹಾಗೂ ನೆಹರೂ ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ (Priyanka Gandhi) ಹಂಚಿಕೊಂಡಿದ್ದಾರೆ. "ಭಾರತದ ನೆಲದಲ್ಲಿರುವ ಎಲ್ಲಾ ಜನರೂ ಅತ್ಯಂತ ಮುಖ್ಯವಾದವರು. ಭಾರತ್ ಮಾತಾ ಕಿ ಜೈ.. ಅವಳ ಭೂಮಿಯಲ್ಲಿ ವಾಸಿಸುವ ಎಲ್ಲರಿಗೂ ಜೈ" ಎಂಬ ಚಾಚಾ ನೆಹರೂ ಅವರ ಸಾಲನ್ನು ಬರೆದುಕೊಂಡಿರುವ ಪ್ರಿಯಾಂಕಾ, ರೈತರು, ಸೈನಿಕರು, ಕಾರ್ಮಿಕರಿಗೆಲ್ಲರಿಗೂ ಪ್ರಿಯಾಂಕಾ ಜೈ ಎಂದು ಬರೆದಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಪಂಡಿತ್ ಜವಾಹರ್ಲಾಲ್ ನೆಹರೂ, 1964ರ ಮೇ 27 ರಂದು ತಾವು ಇಹಲೋಕ ತ್ಯಜಿಸುವವರೆಗೂ ಆಡಳಿತ ನಡೆಸಿದ್ದರು. ಭಾರತದ ಪ್ರಧಾನಿಯಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ ನವೆಂಬರ್ 14 ರಂದು, ಅಂದರೆ ನೆಹರೂ ಅವರ ಜನ್ಮದಿನವನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ (Children's Day) ಆಚರಿಸಲಾಗುತ್ತದೆ.