ಮಖ್ತಲ್( ತೆಲಂಗಾಣ):ಕನ್ಯಾಕುಮಾರಿಯಿಂದ ಆರಂಭಗೊಂಡು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಇಂದು ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಖ್ತಲ್‌ನಿಂದ ಪುನಾರಂಭಗೊಂಡಿದೆ. ತೆಲಂಗಾಣ ರಾಜ್ಯದ ಕಾಂಗ್ರೆಸ್ ಮುಂಡರು, ಅಪಾರ ಜನರು ಭಾಗವಹಿಸಿದ್ದು, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ವಹಿಸಿಕೊಂಡ ಬಳಿಕ ಯಾತ್ರೆಗೆ ಮತ್ತಷ್ಟು ಕಳೆ ಬಂದಿದೆ.
ದೀಪಾವಳಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪದಗ್ರಹಣದ ಹಿನ್ನೆಲೆ 3 ದಿನ ವಿರಾಮ ತೆಗೆದುಕೊಂಡಿತು. ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ತೆಲಂಗಾಣದಲ್ಲಿ ಬದಲಾವಣೆಯ ಗಾಳಿಯೂ ಬೀಸಲಿದೆ ಎಂಬುವುದು ಮುಖಂಡರ ಲೆಕ್ಕಾಚಾರವಾಗಿದೆ.
3,570 ಕಿ.ಮೀ ಸಾಗುವ ಯಾತ್ರೆ:ದೇಶದ 12 ರಾಜ್ಯಗಳಲ್ಲಿ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,570 ಕಿ.ಮೀ ಸಾಗುವ ಯಾತ್ರೆ ಕೇರಳ , ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮುಗಿಸಿಕೊಂಡು ತೆಲಂಗಾಣ ರಾಜ್ಯಕ್ಕೆ ಕಾಲಿಟ್ಟಿದೆ. ಭಾರತ ಜೋಡೋ ಯಾತ್ರೆ ಇಂದು 50 ದಿನಕ್ಕೆ ಕಾಲಿಟ್ಟಿದ್ದು, ಮತ್ತೆ ಅದೇ ಹುಮ್ಮಸ್ಸಿನಲ್ಲಿ ಮುಂದುವರಿದಿದೆ. ಅಪಾರ ಸಮುದಾಯದೊಂದಿಗೆ ಬೆರೆಯುವ ಭಾರತ್ ಜೋಡೋ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಾಣುತ್ತಿದೆ.
ಇದನ್ನು ಓದಿ:ಖರ್ಗೆ ನಾಯಕತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಲಿದೆ: ಸೋನಿಯಾ ಗಾಂಧಿ ವಿಶ್ವಾಸ
ಕರ್ನಾಟಕದಲ್ಲಿ 21 ದಿನ ಯಶಸ್ಸು: ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶ ಪಡೆದ ಭಾರತ್ ಜೋಡೋ ಯಾತ್ರೆ ಅಪಾರ ಜನ ಬೆಂಬಲದೊಂದಿಗೆ ಕರ್ನಾಟಕದಲ್ಲಿ 21 ದಿನಗಳ ಕಾಲ ಜರುಗಿತು. ರಾಜ್ಯದಲ್ಲಿ 500 ಕಿಮೀ ಪಾದಯಾತ್ರೆ ನಡೆಯಿತು.ತಮಿಳುನಾಡು ರಾಜ್ಯದಿಂದ ಚಾಮರಾಜನಗರದಿಂದ ಶುರುವಾಗಿ ಗುಂಡ್ಲುಪೇಟೆ, ಮಂಡ್ಯ, ಮೈಸೂರು, ಬಳ್ಳಾರಿ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲಿ ಸಂಚರಿಸಿತು.
ಈ ಯಾತ್ರೆ ಉದ್ದಕ್ಕೂ ರಾಹುಲ್ ಗಾಂಧಿಯವರು ಹಲವಾರು ಸಮುದಾಯದ ಜನರು, ಸಾಮಾನ್ಯರೊಂದಿಗೆ ಬೆರತು ಅನುಭವಿಸುವ ಕಷ್ಟಗಳನ್ನು ಕಣ್ಣಾರೆ ಕಂಡಿದ್ದಾರೆ. ಎಷ್ಟೋ ಬಡ ಕೃಷಿಕರು ಸೇರಿದಂತೆ ಸಣ್ಣ ವ್ಯಾಪಾರಸ್ಥರಿಗೆ ಸಹಾಯ ಹಸ್ತ ಸಹ ಮಾಡಿದರು. ರಾಜ್ಯದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಭೆ ಸಮಾರಂಭ ಕೈಗೊಳ್ಳುವ ಮೂಲಕ ರಾಹುಲ್ ಸೇರಿದಂತೆ ರಾಜ್ಯದ ಮುಖಂಡರು ಬಿಜೆಪಿ ಸರಕಾರಗಳ ವಿರುದ್ಧ ಟೀಕಾಪ್ರಹಾರ ಸುರಿಮಳೆಗೈದರು.
ಈ ಯಾತ್ರೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿ ರಾಜ್ಯ ಕಾಂಗ್ರೆಸ್ ಸಂಚಲನ ಮೂಡಿಸಿ, ಹೊಸ ಹುರುಪು ತರಿಸಿತು. ಕೆಲ ಚಿತ್ರ ತಾರೆಯರು ಹೆಜ್ಜೆ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರ ಅನುಪಸ್ಥಿತಿಯಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿತು.
ರಾಜ್ಯಾದ್ಯಂತ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಜೋಡೆತ್ತುಗಳಾಗಿ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಗೆ ಹೆಗಲು ಕೊಟ್ಟು ದುಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇದನ್ನು ಓದಿ:ಕೇಜ್ರಿವಾಲ್ ಸಲಹೆ ಬೆನ್ನಲ್ಲೇ ನೋಟ್ ಮೇಲೆ ಶಿವಾಜಿ ಚಿತ್ರ ಪ್ರಿಂಟ್ ಮಾಡುವಂತೆ ಬಿಜೆಪಿಯ ರಾಣೆ ಹೊಸ ಸಲಹೆ