ನವದೆಹಲಿ: ಜುಲೈ 3 ರಂದು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತು ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ಭಾರತೀಯ ಜನತಾ ಪಕ್ಷ ಹೇಳಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಮಹತ್ವದ ಸಭೆ ನಡೆಸುತ್ತಿದೆ. ನವದೆಹಲಿಯ ಜನಪಥ್ 10 ನಲ್ಲಿರುವ ಎಐಸಿಸಿ ಮಾಜಿ ಮುಖ್ಯಸ್ಥೆ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಈ ಮಹತ್ವದ ಸಭೆ ನಡೆಯುತ್ತಿದೆ. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷ ಯಾವ ನಿಲುವು ತೆಗೆದುಕೊಳ್ಳಬೇಕು ಅನ್ನೋದರ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ.
ಇತ್ತೀಚೆಗೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ಪಕ್ಷದ ಹಿರಿಯ ನಾಯಕ ಮತ್ತು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಶೀಲ್ ಮೋದಿ, ಜುಲೈ 3, 2023 ರಂದು ಸೋಮವಾರ ಮಧ್ಯಾಹ್ನ 03.00 ಗಂಟೆಗೆ ಏಕರೂಪ ನಾಗರಿಕ ಸಂಹಿತೆ ಕುರಿತು ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಸೂಚಿಸಬಹುದು. ಸಭೆಯಲ್ಲಿ ಅವರ ಅಭಿಪ್ರಾಯವನ್ನು ಪರಿಗಣಿಸಲಾಗುವುದು. ಸಮಿತಿಯು ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರನ್ನು ಹೊಂದಿರುವುದರಿಂದ, ಸಮಿತಿಯ ಸಭೆಯು ರಾಜಕೀಯೇತರವಾಗಿದೆ ಎಂದು ತಿಳಿಸಿದ್ದರು. ಈ ಭಾಗವಾಗಿ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ತಂಡ ಇಂದು ಈ ಸಭೆ ಕರೆದಿದೆ.
ರಾಜ್ಯಸಭೆಯ ಪ್ರತಿಪಕ್ಷ ನಾಯಕರೂ ಆದ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಜೈರಾಮ್ ರಮೇಶ್, ಪಿ ಚಿದಂಬರಂ, ಪ್ರಮೋದ್ ತಿವಾರಿ, ಗೌರವ್ ಗೊಗೊಯ್, ಕೆ ಸುರೇಶ್ ಮತ್ತು ಮಾಣಿಕಂ ಠಾಗೋರ್ ಸೇರಿದಂತೆ ಉಭಯ ಸದನಗಳ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಜಾರಿ ಹಿನ್ನೆಲೆ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ ಎಂದಿದ್ದರು. ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಭಾಗವಾಗಿದೆ. ಆದರೆ, ಕೆಲವು ವಿರೋಧಿಗಳು ಇಂದು ದೇಶದ ಜನರನ್ನು ಯುಸಿಸಿ ಹೆಸರಿನಲ್ಲಿ ವಿನಾ ಕಾರಣ ಪ್ರಚೋದಿಸುತ್ತಿದ್ದಾರೆ. ಸಂವಿಧಾನದಲ್ಲಿ ಸಮಾನ ಹಕ್ಕುಗಳ ಬಗ್ಗೆಯೂ ಹೇಳಲಾಗಿದೆ. ಸುಪ್ರೀಂ ಕೋರ್ಟ್ ಕೂಡ ಯುಸಿಸಿ ಜಾರಿಗೆ ತರುವಂತೆ ಹೇಳಿದೆ. ಈ (ವಿರೋಧ) ಜನರು ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆಯು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು.