ಕರ್ನಾಟಕ

karnataka

ETV Bharat / bharat

ಸುಪ್ರೀಂ ನೋಟು ಅಮಾನ್ಯೀಕರಣದ ನಿರ್ಧಾರ ಎತ್ತಿ ಹಿಡಿದಿಲ್ಲ, ಇದು ಬಹುಮತದ ತೀರ್ಪಲ್ಲ: ಕಾಂಗ್ರೆಸ್​ - ನೋಟು ಅಮಾನ್ಯೀಕರಣ

ಸುಪ್ರೀಂ ಅಪನಗದೀಕರಣ ನಿರ್ಧಾರ ಎತ್ತಿ ಹಿಡಿದಿಲ್ಲ- ಇದು ಬಹುಮತದ ತೀರ್ಪಲ್ಲ- ಸುಪ್ರೀಂಕೋರ್ಟ್​ ತೀರ್ಪಿನ ಬಗ್ಗೆ ಕಾಂಗ್ರೆಸ್​ ನಾಯಕರ ಅಭಿಪ್ರಾಯ

congress-on-supreme-court-note-ban-verdict
ಸುಪ್ರೀಂಕೋರ್ಟ್​ ತೀರ್ಪು ಬಗ್ಗೆ ಕಾಂಗ್ರೆಸ್​

By

Published : Jan 2, 2023, 3:27 PM IST

Updated : Jan 2, 2023, 3:51 PM IST

ನವದೆಹಲಿ:ನೋಟು ಬ್ಯಾನ್​ ನಿರ್ಧಾರವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿಲ್ಲ. ಬದಲಾಗಿ ಅದರ ದೋಷಗಳನ್ನು ತೋರಿಸಿದೆ. ಸರ್ಕಾರದ ನಿರ್ಧಾರದ ಬಗ್ಗೆ 4:1 ಅಂತರದಲ್ಲಿ ತೀರ್ಪು ಬಂದಿದೆ. ಅಂದರೆ ಕ್ರಮದ ವಿರುದ್ಧವೂ ಆದೇಶವಿದೆ ಎಂದು ಕಾಂಗ್ರೆಸ್​ ಹೇಳಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್​ ಮಾಧ್ಯಮ ಉಸ್ತುವಾರಿ ಜೈರಾಮ್​ ರಮೇಶ್​, 2016 ರಲ್ಲಿ ಕೇಂದ್ರ ಸರ್ಕಾರ ಮಾಡಿದ ನೋಟುಬಂಧಿ ನಿರ್ಧಾರದಿಂದ ಆರ್ಥಿಕ ನೀತಿಯೇ ಕುಸಿದು ಹೋಗಿದೆ. ವಿನಾಶಕಾರಿ ಆರ್ಥಿಕ ನಡೆಯಾಗಿದೆ. ವಿವಾದಾತ್ಮಕ ನಿರ್ಧಾರವನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿಲ್ಲ. ಬದಲಾಗಿ ಅದರ ಲೋಪದೋಷಗಳನ್ನು ಗುರುತಿಸಿದೆ ಎಂದು ಪ್ರತಿಕ್ರಿಯಿಸಿದರು.

ದೇಶದ ಅತ್ಯುನ್ನತ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಬೆಂಬಲಿಸಿದೆ ಎಂಬುದೇ ತಪ್ಪು ಕಲ್ಪನೆ. ನ್ಯಾಯಮೂರ್ತಿ ನಜೀರ್​ ನೇತೃತ್ವದ 5 ಸದಸ್ಯರ ಪೀಠ 4:1 ರಲ್ಲಿ ತೀರ್ಪು ನೀಡಿದೆ. ಓರ್ವ ನ್ಯಾಯಮೂರ್ತಿಗಳು ನಿರ್ಣಯದ ವಿರುದ್ಧ ತೀರ್ಪು ನೀಡಿದ್ದಾರೆ. ಅಲ್ಲದೇ, ಅಮಾನ್ಯೀಕರಣವನ್ನು ಸಂಪೂರ್ಣವಾಗಿ ಪೀಠ ಒಪ್ಪಿಕೊಂಡಿಲ್ಲ. ಆರ್ಥಿಕ ನೀತಿಯಾದ ಕಾರಣ ಅದರ ತಡೆಗೆ ಸೂಚಿಸಿಲ್ಲ ಎಂದರು.

ನೋಟು ಅಮಾನ್ಯೀಕರಣದ ಪರಿಣಾಮದ ಬಗ್ಗೆ ಕೋರ್ಟ್​ ಏನೂ ಹೇಳಿಲ್ಲ. ಇದು ದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ಕುಗ್ಗಿಸಿತು. ನೋಟು ಬ್ಯಾನ್​ ಆದ ಬಳಿಕ ಉದ್ದೇಶಗಳು ಈಡೇರಿದೆಯೇ ಎಂಬುದರ ಬಗ್ಗೆಯೂ ತೀರ್ಪಿನಲ್ಲಿ ಹೇಳಲಾಗಿಲ್ಲ ಎಂದು ಜೈರಾಮ್​ ರಮೇಶ್ ತಿಳಿಸಿದರು.

ಕೇಂದ್ರ ಸರ್ಕಾರ ನೋಟು ಬ್ಯಾನ್​ ಮಾಡಿದ್ದರ ಉದ್ದೇಶಗಳಾದ ನಕಲಿ ನೋಟು, ಕಪ್ಪುಹಣ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲ, ತೆರಿಗೆ ವಂಚನೆಗಳನ್ನು ತಡೆಯುವುದರ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ನಿರ್ಧಾರಗಳೇ ಈಡೇರಿಲ್ಲ ಎಂಬುದು ಸತ್ಯ ಎಂದು ಕಾಂಗ್ರೆಸ್​ ನಾಯಕ ಹೇಳಿದರು.

ಮಾಜಿ ವಿತ್ತ ಸಚಿವ ಪಿ ಚಿದಂಬರಂ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದರೂ, ಅದು ಬಹುಮತದ ತೀರ್ಪಾಗಿಲ್ಲ. ಅಮಾನ್ಯೀಕರಣದ ಸಾಧಕ ಬಾಧಕಗಳನ್ನು ತೀರ್ಪಿನಲ್ಲಿ ಹೇಳಲಾಗಿಲ್ಲ. ಹೀಗಾಗಿ ಇದು ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದೆ ಎಂದು ಹೇಳಲಾಗದು ಎಂದರು.

ಅಪನಗದೀಕರಣ ಘೋಷಣೆ ಹೇಗಿತ್ತು?:2016 ರ ನವೆಂಬರ್​ 8ರಂದು ರಾತ್ರಿ ದಿಢೀರನೇ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಲಾಗಿದೆ. ಇದರ ಬದಲಾಗಿ ಐದು ನೂರು ರೂಪಾಯಿ ಮತ್ತು 2 ಸಾವಿರ ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೇ, ಜನರು ತಮ್ಮಲ್ಲಿರುವ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸರ್ಕಾರ 52 ದಿನಗಳ ಅವಕಾಶ ನೀಡಿತ್ತು.

ಕೇಂದ್ರ ಸರ್ಕಾರದ ಸಮರ್ಥನೆ:ನೋಟು ಬ್ಯಾನ್​ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಅಪನಗದೀಕರಣ ದೇಶದ ಆರ್ಥಿಕ ನೀತಿಯಾಗಿದ್ದು, ಇದರಲ್ಲಿ ಕೋರ್ಟ್​ ಮಧ್ಯಪ್ರವೇಶ ಮಾಡಬಾರದು. ಈಗಿನ ಯಾವುದೇ ನಿರ್ಧಾರ ವಾಪಸ್​ ಪಡೆಯುವ ಸ್ಥಿತಿಯಲ್ಲಿಲ್ಲ ಎಂದು ಒಡೆದ ಮೊಟ್ಟೆಯನ್ನು ಮರುಜೋಡಿಸುವ ಯತ್ನದ ಉದಾಹರಣೆ ನೀಡಿತ್ತು.

ನಕಲಿ ನೋಟು ತಡೆ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲಕ್ಕೆ ಕಡಿವಾಣ, ಕಪ್ಪುಹಣ ಮತ್ತು ತೆರಿಗೆ ವಂಚನೆಯನ್ನು ತಡೆಯಲು ಅಪನಗದೀಕರಣ ಘೋಷಿಸಲಾಗಿದೆ. ಇದು ದೀರ್ಘಕಾಲ ಸಮಾಲೋಚನೆ ನಡೆಸಿಯೇ ಕೈಗೊಂಡ ನಿರ್ಧಾರವಾಗಿದೆ ಎಂದು ತಿಳಿಸಿತ್ತು.

ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಡಿ.7ರಂದು ಆರ್​ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ದಾಖಲೆಗಳನ್ನು ನೀಡುವಂತೆ ನಿರ್ದೇಶನ ನೀಡಿತ್ತು. ಈ ಸಂದರ್ಭದಲ್ಲಿ ಅರ್ಜಿಗಳ ಸಂಬಂಧ ಅಟರ್ನಿ ಜನರಲ್​ ಆರ್.ವೆಂಕಟರಮಣಿ, ಆರ್​​ಬಿಐ ಸಮಾಲೋಚಕರು ಮತ್ತು ಅರ್ಜಿದಾರರ ವಕೀಲರೂ ಸೇರಿದಂತೆ ಹಿರಿಯ ನ್ಯಾಯವಾದಿಗಳಾದ ಪಿ.ಚಿದಂಬರಂ ಮತ್ತು ಶ್ಯಾಮ್​ ದಿವಾನ್​ ಅವರ ವಾದವನ್ನು ಕೋರ್ಟ್ ಆಲಿಸಿತ್ತು.

ಓದಿ:ಕೇಂದ್ರ ಸರ್ಕಾರದ ನೋಟು ಬ್ಯಾನ್‌ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್

Last Updated : Jan 2, 2023, 3:51 PM IST

ABOUT THE AUTHOR

...view details