ನವದೆಹಲಿ:ಕೋವಿಡ್ ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಪ್ರಶಂಸೆ ವ್ಯಕ್ತಪಡಿಸಿದ ನಂತರ ಕಾಂಗ್ರೆಸ್ನಲ್ಲಿ ವಿರೋಧದ ಅಲೆ ಎದ್ದಿದ್ದು, ಇದು ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆ ಎನ್ನಲಾಗ್ತಿದೆ.
ಇತ್ತ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಪ್ರಧಾನಿ ಭೇಟಿಗೆ ಟೀಕೆ ವ್ಯಕ್ತಪಡಿಸಿದ ಬೆನ್ನಲ್ಲೇ ಆನಂದ್ ಶರ್ಮಾ ಲಸಿಕೆ ಕೇಂದ್ರಗಳಿಗೆ ಮೋದಿ ಭೇಟಿ ನೀಡಿದ್ದಕ್ಕೆ ಅವರನ್ನು ಹಾಡಿಹೊಗಳಿ ಟ್ವೀಟ್ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಅವಸಾನದತ್ತ ಸಾಗ್ತಿರುವ ಕಾಂಗ್ರೆಸ್ ಪಕ್ಷದ ಬಲಪಡಿಸುವಿಕೆಗಾಗಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರ ಬರೆದ 23 ನಾಯಕರಲ್ಲಿ ಆನಂದ್ ಶರ್ಮಾ ಕೂಡ ಒಬ್ಬರು. ಅವರೇ ಇದೀಗ ಸೀರಮ್ ಸಂಸ್ಥೆ, ಭಾರತ್ ಬಯೋಟೆಕ್ ಮತ್ತು ಝೈಡಸ್ ಕ್ಯಾಡಿಲಾಗೆ ಮೋದಿ ಭೇಟಿ ನೀಡಿದ್ದನ್ನು "ಭಾರತೀಯ ವಿಜ್ಞಾನಿಗಳ ಪ್ರಧಾನಿ ನೀಡಿದ ಮಾನ್ಯತೆ ಮತ್ತು ಕೋವಿಡ್ ಲಸಿಕೆ ತಯಾರಿಸಲು ಅವರು ಮಾಡಿದ ಕೆಲಸ" ಎಂದು ಅವರು ಬಣ್ಣಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ಇದು ಸುರ್ಜೆವಾಲಾ ಟೀಕೆಗೂ ಆನಂದ್ ಶರ್ಮಾ ಹೇಳಿಕೆಗೂ ತದ್ವಿರುದ್ಧವಾಗಿದ್ದು, ಕಾಂಗ್ರೆಸ್ ವಲಯದಲ್ಲಿ ಮತ್ತೆ ಹಿನ್ನಡೆಯ ಲಕ್ಷಣಗಳು ಗೋಚರಿಸುತ್ತಿವೆ.
"ವಿಮಾನದಲ್ಲಿ ಹಾರಾಟ ಮಾಡುವ ಬದಲು ರಸ್ತೆಯಲ್ಲಿರುವ ರೈತರೊಂದಿಗೆ ಪ್ರಧಾನಿ ಮಾತುಕತೆ ನಡೆಸಬೇಕೆಂದು ಬಯಸುತ್ತೇನೆ" ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದರು. ಕೊರೊನಾ ವೈರಸ್ಗೆ ಲಸಿಕೆಯನ್ನು ವಿಜ್ಞಾನಿಗಳು ಕಂಡುಹಿಡಿಯುತ್ತಾರೆ, ರೈತರು ದೇಶವನ್ನು ಪೋಷಿಸುತ್ತಾರೆ ಮತ್ತು ಮೋದಿ ಜಿ ಮತ್ತು ಬಿಜೆಪಿ ನಾಯಕರು ಟಿವಿಗಳನ್ನ ನಿರ್ವಹಿಸುತ್ತಾರೆ" ಎಂದು ಸುರ್ಜೆವಾಲಾ ಟೀಕಿಸಿದ್ದರು.