ನವದೆಹಲಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದಿಂದ ಶೇ. 40ರಷ್ಟು ಕಮಿಷನ್ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ನೇರ ಮಧ್ಯಸ್ಥಿಕೆಗೆ ಆಗ್ರಹಿಸಿರುವ ಅವರು, ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದಲ್ಲಿ 4 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಮಿಷನ್ ಬೇಡಿಕೆ ಇಟ್ಟಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಡಾ.ಎಲ್.ಹನುಮತಯ್ಯ, ಡಿ.ಕೆ.ಸುರೇಶ್ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿರುವ ಹನುಮಂತಯ್ಯ, ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಹಿಂಡಲಗಾ ಗ್ರಾಮ ಪಂಚಾಯ್ತಿಯಲ್ಲಿ 4 ಕೋಟಿ ರೂ. ಗುತ್ತಿಗೆ ಕಾಮಗಾರಿ ನಡೆಸಿದ್ದು, ಇದೀಗ ಬಿಲ್ ಬಿಡುಗಡೆ ಮಾಡುವಂತೆ ಕೇಳಿದಾಗ ಶೇ. 40ರಷ್ಟು ಕಮಿಷನ್ ನೀಡುವಂತೆ ಕೇಳಿದ್ದಾರೆ. ಈಗಾಗಲೇ ಅವರು 15 ಲಕ್ಷ ರೂ ಪಾವತಿ ಮಾಡಿದ್ದಾರೆಂದು ತಿಳಿಸಿದರು.
ಬಿಲ್ ಬಿಡುಗಡೆ ಮಾಡುವಂತೆ ಸುಮಾರು 80 ಬಾರಿ ಸಚಿವರನ್ನು ಭೇಟಿ ಮಾಡಿದ್ರೂ ಕೂಡ ಪ್ರಯೋಜನವಾಗಿಲ್ಲ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆರೋಪಿಸಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾಗಿದ್ದು, ಸಚಿವರು ಬಿಲ್ ರಿಲೀಸ್ ಮಾಡದಿದ್ದಾಗ ದೆಹಲಿಗೆ ತೆರಳಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಮಾಡಿದ್ದಾರೆ. ಆದರೂ ಹಣ ಬಿಡುಗಡೆಯಾಗಿಲ್ಲ ಎಂದು ಕೈ ಸಂಸದರು ತಿಳಿಸಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಇಲ್ಲಿಗೆ ಆಗಮಿಸಿದ್ದ ಪ್ರಧಾನಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕಮಿಷನ್ ತೆಗೆದುಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದರು. ಆದರೆ, ಇದೀಗ ಗುತ್ತಿಗೆದಾರರು ಬಿಜೆಪಿ ವಿರುದ್ಧ ನೇರವಾಗಿ ದೂರು ನೀಡಿದ್ರೂ ಕ್ರಮ ಕೈಗೊಳ್ಳುತ್ತಿಲ್ಲ. ಗುತ್ತಿಗೆದಾರರ ಸಂಘ 2021ರ ಜುಲೈ ತಿಂಗಳಲ್ಲೇ ಸುದ್ದಿಗೋಷ್ಠಿ ನಡೆಸಿ ಸಚಿವರ ಮೇಲೆ ಆರೋಪ ಮಾಡಿದ್ರೂ ಕೂಡ ಪ್ರಧಾನಿ, ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ವೇಳೆ ಮಾತನಾಡಿರುವ ಸಂಸದ ಡಿ.ಕೆ.ಸುರೇಶ್, ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆದೇಶ ಹೊರಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿವರಣೆ ನೀಡಬೇಕು. ಇದರ ಜೊತೆಗೆ, ಕರ್ನಾಟಕದಲ್ಲಿರುವ ಭ್ರಷ್ಟಾಚಾರಪೀಡಿತ ಸರ್ಕಾರವನ್ನು ತಕ್ಷಣವೇ ವಜಾಗೊಳಿಸುವಂತೆ ಒತ್ತಾಯಿಸಿದರು.