ಚಂಡೀಗಢ(ಪಂಜಾಬ್):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಪಂಜಾಬ್ ಸಂಸದ ಜಲಧರ್ ಸಂತೋಖ್ ಸಿಂಗ್ ಚೌಧರಿ ಅವರು ಇಂದು ಬೆಳಗ್ಗೆ ಹಠಾತ್ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ದಿಗ್ಭ್ರಮೆ ಮೂಡಿಸಿದ್ದು, ಸದ್ಯಕ್ಕೆ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಪಂಜಾಬ್ನಲ್ಲಿ ಸಾಗುತ್ತಿರುವ ಕಾಂಗ್ರೆಸ್ ಜೋಡೋ ಯಾತ್ರೆ ಇಂದು ಬೆಳಗ್ಗೆ ಲಾಧೋವಲ್ ಟೋಲ್ ಪ್ಲಾಜಾದಿಂದ ಆರಂಭವಾಯಿತು. ಎಂದಿನಂತೆ ನಾಯಕರು ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದರು. ಯಾತ್ರೆಯನ್ನು ಬೆಂಬಲಿಸಿ ಕಾಂಗ್ರೆಸ್ ಸಂಸದ ಜಲಧರ್ ಸಂತೋಖ್ ಸಿಂಗ್ ಚೌಧರಿ ಅವರು ಕೂಡ ಭಾಗವಹಿಸಿದ್ದರು. ಯಾತ್ರೆಯಲ್ಲಿ ನಡೆಯುತ್ತಿದ್ದ ವೇಳೆ ಸಂತೋಖ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಫಗ್ವಾರದ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೊತ್ತಿಗಾಗಲೇ ಸಂತೋಖ್ ಸಿಂಗ್ ಚೌಧರಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವೈದ್ಯರು ಸಂಸದರ ಸಾವನ್ನು ದೃಢಪಡಿಸಿದ್ದರಿಂದ ಯಾತ್ರೆಯನ್ನು ಮೊಟಕುಗೊಳಿಸಲಾಯಿತು.
ಇನ್ನು ಸಿಂಗ್ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂತಾಪ ಸೂಚಿಸಿದ್ದಾರೆ. "ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅಕಾಲಿಕ ಸಾವು ತೀವ್ರ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಸಂಸದರ ಸಾವಿನ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, "ಹೃದಯಾಘಾತಕ್ಕೀಡಾಗಿ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಇಂತಹ ದುಃಖದ ಸಮಯದಲ್ಲಿ ಅವರ ಇಡೀ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಹೇಳಿದ್ದಾರೆ.