ಕರ್ನಾಟಕ

karnataka

One nation one election: 'ಒಂದು ರಾಷ್ಟ್ರ ಒಂದು ಚುನಾವಣೆ' ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ; ರಾಹುಲ್​ ಗಾಂಧಿ

By ETV Bharat Karnataka Team

Published : Sep 3, 2023, 3:25 PM IST

ಒಂದು ರಾಷ್ಟ್ರ ಒಂದು ಚುನಾವಣೆ ಸಾಧ್ಯತೆಯ ಅಧ್ಯಯನಕ್ಕೆ ರಚಿಸಲಾಗಿರುವ ಸಮಿತಿಯನ್ನು ಕಾಂಗ್ರೆಸ್​ ಬಹಿಷ್ಕರಿಸಿದೆ. ಪಕ್ಷ ನಾಯಕ ರಾಹುಲ್​ ಗಾಂಧಿ ಸರ್ಕಾರದ ಈ ನಡೆ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದು ಟೀಕಿಸಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ನವದೆಹಲಿ:ಒಂದು ರಾಷ್ಟ್ರ, ಒಂದು ಚುನಾವಣೆ ಸಮಿತಿಯಲ್ಲಿರಲು ಕಾಂಗ್ರೆಸ್​ ನಿರಾಕರಿಸಿದ ಬೆನ್ನಲ್ಲೇ ಅದರ ನಾಯಕ, ಸಂಸದ ರಾಹುಲ್​ ಗಾಂಧಿ ಅವರು, ಏಕಕಾಲಕ್ಕೆ ಚುನಾವಣೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು 'ಒಕ್ಕೂಟ ವ್ಯವಸ್ಥೆ ಮತ್ತು ಎಲ್ಲಾ ರಾಜ್ಯಗಳ ಮೇಲಿನ ದಾಳಿ ಇದಾಗಿದೆ' ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಯ ಕುರಿತು ಅಧ್ಯಯನಕ್ಕೆ ಮಾಜಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ. ಅದರಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಸದಸ್ಯ ಸ್ಥಾನ ನೀಡಲಾಗಿತ್ತು. ಆದರೆ, ಸಮಿತಿಯ ಭಾಗವಾಗಲು ಅವರು ನಿರಾಕರಿಸಿದ್ದಾರೆ. ಇದರ ಬೆನ್ನಲ್ಲೇ ರಾಹುಲ್​ ಗಾಂಧಿ ಅವರು ಏಕ ಚುನಾವಣೆ ಚಿಂತನೆಯನ್ನು ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ(ಹಿಂದಿನ ಟ್ವಿಟರ್​) ಬರೆದುಕೊಂಡಿರುವ ಕೇರಳದ ವಯನಾಡು ಸಂಸದ, 'ಒಂದು ರಾಷ್ಟ್ರ ಒಂದು ಚುನಾವಣೆ ಕಲ್ಪನೆಯು ಭಾರತೀಯ ಒಕ್ಕೂಟ ಮತ್ತು ಅದರ ಎಲ್ಲಾ ರಾಜ್ಯಗಳ ಮೇಲಿನ ದಾಳಿಯಾಗಿದೆ. ಇಂಡಿಯಾ ಎಂದರೆ ಭಾರತ. ಭಾರತ ಎಂದರೆ ಒಕ್ಕೂಟ ವ್ಯವಸ್ಥೆ' ಎಂದು ಹೇಳಿದ್ದಾರೆ.

ಸಮಿತಿಯಲ್ಲಿ ಖರ್ಗೆಗಿಲ್ಲ ಸ್ಥಾನ:ಒಂದೇ ಬಾರಿಗೆ ಚುನಾವಣೆ ನಡೆಸುವ ವಿಚಾರವಾಗಿ ರಚಿಸಲಾದ ಸಮಿತಿಯಲ್ಲಿ ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರ ಬದಲಿಗೆ ಸಂಸದ ಅಧೀರ್​ ರಂಜನ್​ ಚೌಧರಿ ಅವರಿಗೆ ಸ್ಥಾನ ನೀಡಲಾಗಿದ್ದರ ಬಗ್ಗೆಯೂ ರಾಹುಲ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ರಾಜಕಾರಣಿ. ಅವರಿಗೆ ಸ್ಥಾನ ನೀಡದೇ ಸಮಿತಿಯಿಂದ ಹೊರಗಿಟ್ಟಿದ್ದು ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅಧೀರ್​ ರಂಜನ್​ ಚೌಧರಿ ಅವರು ಸಮಿತಿಯ ಸದಸ್ಯ ಸ್ಥಾನ ಸ್ವೀಕರಿಸಿಲು ನಿರಾಕರಿಸಿದ್ದಾರೆ.

ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಚೌಧರಿ, 'ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಭಾಗವಾಗುವುದಿಲ್ಲ. ಇದೆಲ್ಲವೂ ದೊಡ್ಡ ವಂಚನೆಯಾಗಿದೆ. ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೇರಿಸದೇ ಇರುವುದು ದೊಡ್ಡ ಅವಮಾನ. ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉದ್ದೇಶಪೂರ್ವಕವಾಗಿ ಮಾಡಿದ ಅವಮಾನವಾಗಿದೆ. ಹೀಗಾಗಿ, ನಾನು ಸಮಿತಿಯಲ್ಲಿ ಇರುವುದಿಲ್ಲ' ಎಂದು ಉಲ್ಲೇಖಿಸಿದ್ದಾರೆ.

ಸಮಿತಿ ಹೀಗಿದೆ:ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆ ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ 'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಸಂಬಂಧಿಸಿದ ಪರಿಕಲ್ಪನೆಯನ್ನು ಪರಿಶೀಲಿಸಲು ಮತ್ತು ಶೀಘ್ರವಾಗಿ ಶಿಫಾರಸುಗಳನ್ನು ಮಾಡಲು 8 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ನಿನ್ನೆ (ಶನಿವಾರ) ಸೂಚನೆ ನೀಡಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದು, ಗೃಹ ಸಚಿವ ಅಮಿತ್ ಶಾ, ಲೋಕಸಭೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಮತ್ತು ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್‌ ಕೆ ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಕೂಡ ಸದಸ್ಯರಾಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಅಧಿರ್ ರಂಜನ್ ಚೌಧರಿ ಸಮಿತಿಯ ಸದಸ್ಯನಾಗಲು ನಿರಾಕರಿಸಿದ್ದಾರೆ. (ಪಿಟಿಐ)

ಇದನ್ನೂ ಓದಿ:'ಒಂದು ರಾಷ್ಟ್ರ, ಒಂದು ಚುನಾವಣೆ' ಸಮಿತಿ ಸದಸ್ಯನಾಗಲು ನಿರಾಕರಿಸಿದ ಕಾಂಗ್ರೆಸ್‌ ಸಂಸದ ಅಧಿರ್ ರಂಜನ್ ಚೌಧರಿ

ABOUT THE AUTHOR

...view details