ಅಮೃತಸರ (ಪಂಜಾಬ್): ಕಾಂಗ್ರೆಸ್ ನಾಯಕ, ಲೋಕಸಭೆ ಸಂಸದ ರಾಹುಲ್ ಗಾಂಧಿ ಅವರು ಇಂದು ಅಮೃತಸರದ ಪ್ರಸಿದ್ಧ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ, ಸ್ವಯಂಸೇವೆಯ ಭಾಗವಾಗಿ ಭಕ್ತರು ಬಳಸಿದ ಪಾತ್ರೆಗಳನ್ನು ತೊಳೆದರು. ಇದಕ್ಕೂ ಮೊದಲು ಸಿಖ್ ಸಂಪ್ರದಾಯದಂತೆ ತಲೆಗೆ ನೀಲಿ ಬಣ್ಣದ ಬಟ್ಟೆ ಸುತ್ತಿ ದೇಗುಲದ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಸಿಖ್ಖರ ಅತ್ಯುನ್ನತ ಸ್ಥಾನ ಅಕಾಲ್ ತಕ್ತ್ಗೆ ಭೇಟಿ ನೀಡಿದರು. ನಾಳೆ ರಾಹುಲ್ ಇಲ್ಲಿ ನಡೆಯುವ ಫಲ್ಕಿ ಸೇವಾದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಪ್ರಕಟಿಸಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ರಾಹುಲ್ ಗಾಂಧಿ ಅವರು ನಗರಕ್ಕೆ ವೈಯಕ್ತಿಕವಾಗಿ ಭೇಟಿ ನೀಡಲಿದ್ದಾರೆ. ಸಚ್ಖಂಡ್ ಶ್ರೀ ಹರ್ಮಂದಿರ್ ಸಾಹಿಬ್‌ನಲ್ಲಿ ನಮನ ಸಲ್ಲಿಸಲು ಅಮೃತಸರಕ್ಕೆ ಆಗಮಿಸಲಿದ್ದಾರೆ. ಇದು ಅವರ ವೈಯಕ್ತಿಕ,ಆಧ್ಯಾತ್ಮಿಕ ಭೇಟಿಯಾಗಿದೆ. ಅವರ ಖಾಸಗಿತನವನ್ನು ಗೌರವಿಸೋಣ ಎಂದು ಮನವಿ ಮಾಡಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸೆರೆ:2015ರ ಡ್ರಗ್ಸ್ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. ಇದರ ನಡುವೆಯೇ ರಾಹುಲ್ ಗಾಂಧಿ ಪಂಜಾಬ್ಗೆ ಭೇಟಿ ನೀಡಿದ್ದು ಕುತೂಹಲಕಾರಿಯಾಗಿದೆ.