ಲೇಹ್ (ಲಡಾಖ್): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಲಡಾಖ್ ಪ್ರವಾಸದ ಕೊನೆಯ ಹಂತದಲ್ಲಿ ಗುರುವಾರ ಸಂಜೆ ಪಡುಮ್‌ನಿಂದ ಕಾರ್ಗಿಲ್‌ಗೆ ತೆರಳುವ ರಸ್ತೆ ಮಾರ್ಗದಲ್ಲಿ ಜನರೊಂದಿಗೆ ಸಂವಾದ ನಡೆಸಿದರು. ಈ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
"ಲಡಾಖ್‌ನ ಅನೇಕ ಸುಂದರ ಜನರೊಂದಿಗೆ ಸಂವಹನ ನಡೆಸುವ ಅವಕಾಶ ನನಗೆ ಸಿಕ್ಕಿತು. ನಾನು ಪಡುಮ್‌ನಿಂದ ಕಾರ್ಗಿಲ್‌ಗೆ ತೆರಳುವ ರಸ್ತೆ ಮಾರ್ಗದಲ್ಲಿ ಅವರೊಂದಿಗೆ ಪ್ರೀತಿ ಹಂಚಿಕೊಂಡಿದ್ದೇನೆ. ಕಾರ್ಗಿಲ್‌ನ ಯುವಕರನ್ನು ಭೇಟಿ ಮಾಡಿ ಅವರೊಂದಿಗೆ ಸಂಭಾಷಣೆ ನಡೆಸಿದೆ. ಕಾರ್ಗಿಲ್ ಯುದ್ಧದ ಧೈರ್ಯ ಮತ್ತು ಹುತಾತ್ಮತೆಯ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುತ್ತಿದೆ. ಇದು ದೇಶಕ್ಕಾಗಿ ತ್ಯಾಗ ಮಾಡಲು ನಮಗೆ ಸ್ಫೂರ್ತಿ" ಎಂದು ತಿಳಿಸಿದ್ದಾರೆ.
ಕಾರ್ಗಿಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ಕೆಲವು ತಿಂಗಳ ಹಿಂದೆ, ನಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ' ಪಾದಯಾತ್ರೆ ನಡೆಸಿದ್ದೆವು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹರಡುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ನಿಲ್ಲುವುದು ನಮ್ಮ ಗುರಿಯಾಗಿತ್ತು. ಯಾತ್ರೆಯಿಂದ ಬಂದ ಸಂದೇಶ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವುದಾಗಿತ್ತು. ಕಳೆದ ಕೆಲವು ದಿನಗಳಲ್ಲಿ ಇದನ್ನು ನಾನೇ ನೋಡಿದೆ. ಯಾತ್ರೆಯ ಸಮಯದಲ್ಲಿ, ನಾನು ಲಡಾಖ್‌ಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಚಳಿಗಾಲದಲ್ಲಿ ಹಿಮ ಬೀಳುತ್ತದೆ. ಲಡಾಖ್‌ನಲ್ಲಿ ಯಾತ್ರೆಯನ್ನು ನಡೆಸುವುದು ನನ್ನ ಗುರಿಯಾಗಿತ್ತು. ಹಾಗಾಗಿ ನಾನು ಈ ಬಾರಿ ಮೋಟಾರ್‌ಬೈಕ್‌ನಲ್ಲಿ ಆಗಮಿಸಿದ್ದೇನೆ" ಎಂದರು.