ಕಾರ್ಗಿಲ್ (ಲಡಾಖ್): "ಲಡಾಖ್‌ನಲ್ಲಿರುವ ಜನರ ‘ರಾಜಕೀಯ ಧ್ವನಿ’ಯನ್ನು ಹತ್ತಿಕ್ಕಲಾಗುತ್ತಿದೆ. ಹಾಗಾಗಿ ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವೆ" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು (ಶುಕ್ರವಾರ) ಭರವಸೆ ನೀಡಿದ್ದಾರೆ. ಕಳೆದ ಒಂಬತ್ತು ದಿನಗಳಿಂದ ಶಿಖರ ಪ್ರದೇಶ ಲಡಾಖ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಕೊನೆಯ ದಿನವಾದ ಇಂದು ಕಾರ್ಗಿಲ್‌ನ ಬೀಮಾತಂಗ್‌ನಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. "ಲಡಾಖ್ ಒಂದೇ ಧರ್ಮೀಯರಿರುವ ಜಾಗವಲ್ಲ, ವಿವಿಧ ಧರ್ಮ ಮತ್ತು ಜಾತಿಗಳ ಜನರಿರುವ ಜಾಗ" ಎಂದು ಲಾಡಾಖ್ನ ವೈಶಿಷ್ಟ್ಯವನ್ನು ಹೊಗಳಿದರು.
"ನಾನು ಲಡಾಖ್‌ನ ಮೂಲೆಮೂಲೆಗೆ ಹೋಗಿ ಯುವಕರು, ತಾಯಂದಿರು, ಸಹೋದರಿಯರು ಮತ್ತು ಬಡವರ ಜೊತೆ ಮಾತನಾಡಿದ್ದೇನೆ. ನಾನು ನಿಮ್ಮ 'ಮನ್ ಕಿ ಬಾತ್' ಕೇಳಬಯಸುತ್ತೇನೆ" ಎಂದು ಪ್ರಧಾನಿ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಮುಂದುವರೆದು, "...ಲಡಾಖ್ ಒಂದು ಆಯಕಟ್ಟಿನ ಸ್ಥಳ. ಚೀನಾ ದೇಶ ಭಾರತದ ಸಾವಿರಾರು ಕಿಲೋಮೀಟರ್ ಭೂಮಿಯನ್ನು ಕಿತ್ತುಕೊಂಡಿದೆ. ಆದರೆ, ಲಡಾಖ್‌ನ ಒಂದಿಂಚೂ ಕೂಡ ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರತಿಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಬೇಸರದ ಸಂಗತಿ. ಅವರ ಈ ಹೇಳಿಕೆ ಶುದ್ಧ ಸುಳ್ಳಿನಿಂದ ಕೂಡಿದೆ. ಆದರೆ, ಸತ್ಯ ಲಡಾಖ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿದೆ. ಇಲ್ಲಿನ ಜನರಿಗೆ ಉದ್ಯೋಗದ ಭರವಸೆ ನೀಡಿದ್ದರು. ಅದೂ ಕೂಡ ಸುಳ್ಳಾಗಿದೆ. ಹಾಗಾಗಿ ನಾನು ಲಡಾಖ್‌ನ ಪ್ರಮುಖ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ" ಎಂದು ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.