ಚಂದ್ರಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದ ಏಕೈಕ ಲೋಕಸಭಾ ಸದಸ್ಯರಾಗಿದ್ದ ಸುರೇಶ್ ಅಲಿಯಾಸ್ ಬಾಲು ಧನೋರ್ಕರ್ ಅವರು ನಿನ್ನೆ (ಸೋಮವಾರ) ರಾತ್ರಿ ದೆಹಲಿಯಲ್ಲಿ ನಿಧನರಾಗಿದ್ದಾರೆ. ಕರುಳಿನ ಸೋಂಕಿನಿಂದಾಗಿ ಧನೋರ್ಕರ್ ನಾಗ್ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಧನೋರ್ಕರ್ ಅವರನ್ನು ನಾಗ್ಪುರದಿಂದ ಏರ್ ಆಂಬ್ಯುಲೆನ್ಸ್ ಮೂಲಕ ದೆಹಲಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಕಿಡ್ನಿ ಸ್ಟೋನ್ ಇದ್ದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೇ ವೇಳೆ ಕರುಳಿನಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
4 ದಿನದ ಹಿಂದೆ ತಂದೆ ವಿಧಿವಶ :ಸಂಸದ ಬಾಲು ಧನೋರ್ಕರ್ ಅವರ ತಂದೆ ನಾಲ್ಕು ದಿನಗಳ ಹಿಂದಷ್ಟೇ ನಿಧನರಾಗಿದ್ದರು. ಇದೇ ವೇಳೆ ಸಂಸದರ ಆರೋಗ್ಯ ಹದಗೆಟ್ಟಿದ್ದರಿಂದ ಅವರ ತಂದೆಯ ಅಂತ್ಯಕ್ರಿಯೆಯಲ್ಲೂ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
ಗಣ್ಯರಿಂದ ಸಂತಾಪ: "ಚಂದ್ರಾಪುರದ ಲೋಕಸಭಾ ಸದಸ್ಯ ಧನೋರ್ಕರ್ ಅವರ ಹಠಾತ್ ನಿಧನದ ಸುದ್ದಿ ತುಂಬಾ ದುಃಖಕರ. ಅವರು ತಮ್ಮ ಪ್ರದೇಶ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು" - ದ್ರೌಪದಿ ಮುರ್ಮು, ರಾಷ್ಟ್ರಪತಿ
"ಚಂದ್ರಾಪುರದ ಲೋಕಸಭಾ ಸಂಸದರಾದ ನಾರಾಯಣರಾವ್ ಧನೋರ್ಕರ್ ಜಿ ಅವರ ನಿಧನದಿಂದ ದುಃಖವಾಗಿದೆ. ಸಾರ್ವಜನಿಕ ಸೇವೆ ಮತ್ತು ಬಡವರ ಸಬಲೀಕರಣಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪಗಳು. ಓಂ ಶಾಂತಿ"- ಪ್ರಧಾನಿ ಮೋದಿ
"ಚಂದ್ರಾಪುರ ಮಹಾರಾಷ್ಟ್ರದ ಕಾಂಗ್ರೆಸ್ ಸಂಸದ ಸುರೇಶ್ ನಾರಾಯಣ ಧನೋರ್ಕರ್ ಅವರ ಅಕಾಲಿಕ ನಿಧನದ ವಿಷಯ ತಿಳಿದು ದುಃಖವಾಯಿತು. ಅವರು ತಳಮಟ್ಟದ ನಾಯಕರಾಗಿದ್ದರು. ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ನಮ್ಮ ಆಳವಾದ ಸಂತಾಪಗಳು"- ಖರ್ಗೆ
ಧನೋರ್ಕರ್ ಅವರ ನಿಧನದಿಂದ ಕಾಂಗ್ರೆಸ್ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.- ರಾಹುಲ್ ಗಾಂಧಿ
ಧನೋರ್ಕರ್ ರಾಜಕೀಯ ಬದುಕು: ಧನೋರ್ಕರ್ ಅವರು ಬಾಳಾಸಾಹೇಬ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. 2014 ರಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಸದಸ್ಯರಾದರು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಮತ್ತು ನಾಲ್ಕು ಅವಧಿಯ ಸಂಸದ ಹಂಸರಾಜ್ ಅಹಿರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶಿವಸೇನೆ ತೊರೆದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಅಹಿರ್ ಅವರನ್ನು 44,763 ಮತಗಳ ಅಂತರದಿಂದ ಸೋಲಿಸುವ ಮೂಲಕ ಚಂದ್ರಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ವಶವಾಯಿತು. ಧನೋರ್ಕರ್ ಅವರ ಪತ್ನಿ ಪ್ರತಿಭಾ ಮಹಾರಾಷ್ಟ್ರದ ವರೋರಾ-ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿದ್ದಾರೆ.
ಇದನ್ನೂ ಓದಿ:ದೇಶದ ಬೆಳವಣಿಗೆಗೆ 9 ವರ್ಷಗಳ ನಿರಂತರ ಸೇವೆ: ಪ್ರಧಾನಿ ಮೋದಿ