ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರು ಇಲ್ಲಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಆಗಮಿಸಿದ್ದಾರೆ. ಇನ್ನೊಂದೆಡೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ತಿಹಾರ್ ಜೈಲಿನಲ್ಲಿ ಇಡಿ ವಿಚಾರಣೆ ಆರಂಭಿಸಿದೆ.
ಕರ್ನಾಟಕದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹೊತ್ತಲ್ಲಿ ಶಾಸಕ ಜಮೀರ್ ಅಹಮದ್ಗೆ ಇಡಿ ವಿಚಾರಣೆಗೆ ಕರೆದಿದೆ. ಜಮೀರ್ ಅವರು ಉದ್ಯಮಿ ಕೆಜಿಎಫ್ ಬಾಬು ಅವರಿಂದ ಸಾಲ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಇಡಿ ಅಧಿಕಾರಿಗಳು ಇತ್ತೀಚೆಗೆ ಶಾಸಕರ ಮನೆಯ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಕಚೇರಿಗೆ ಹಾಜರಾಗಲು ಸೂಚಿಸಲಾಗಿತ್ತು. ಅದರಂತೆ ಶಾಸಕ ಜಮೀರ್ ಇಂದು ದೆಹಲಿಯ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿ ವಿಚಾರಣೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.
2021ರಲ್ಲಿ ಜಮೀರ್ ವಿರುದ್ಧ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪದ ಅವರ ಭವ್ಯವಾದ ಬಂಗಲೆಯನ್ನು ಶೋಧ ನಡೆಸಿತ್ತು. ಮನೆಯ ಮೌಲ್ಯವನ್ನು ಜಮೀರ್ 40 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಆದರೆ, ಮಾರುಕಟ್ಟೆ ದರದಲ್ಲಿ ಅದೀಗ ಸುಮಾರು 80 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಮೌಲ್ಯಮಾಪಕರು ವರದಿ ನೀಡಿದ್ದರು.
ತಿಹಾರ್ ಜೈಲಿನಲ್ಲಿ ಸಿಸೋಡಿಯಾ ವಿಚಾರಣೆ:ಇನ್ನು ದೆಹಲಿ ಅಬಕಾರಿ ಹಗರಣದಲ್ಲಿ ತಿಹಾರ್ ಜೈಲು ಪಾಲಾಗಿರುವ ಮನೀಶ್ ಸಿಸೋಡಿಯಾರನ್ನು ಇಂದು ಇಡಿ ಅಧಿಕಾರಿಗಳು ಜೈಲಿನಲ್ಲೇ ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಅಂದರೆ ಮಂಗಳವಾರ ಇಡಿ ವಿಚಾರಣೆ ನಡೆಸಿ ಸಿಸೋಡಿಯಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಅಗತ್ಯವಿರುವ ಕಾರಣ ಇಂದು ಕೂಡ ವಿಚಾರಣೆ ಮುಂದುವರಿಸಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.