ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ತಮ್ಮ ಪುತ್ರನ ವಿವಾಹಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಜನವರಿ 18ರಂದು ನಿಶ್ಚಿತಾರ್ಥ ನಡೆಯಲಿದ್ದು, ಫೆಬ್ರವರಿ 17 ರಂದು ವಿವಾಹ ಜರುಗಲಿದೆ. ಪುತ್ರ ವೈಎಸ್ ರಾಜಾರೆಡ್ಡಿ ವಿವಾಹಕ್ಕೆ ಕುಟುಂಬ ಸಮೇತರಾಗಿ ಸಾಕ್ಷಿಯಾಗುವಂತೆ ಶರ್ಮಿಳಾ ಅವರು ನಾಯ್ಡು ಅವರಲ್ಲಿ ಮನವಿ ಮಾಡಿದರು. ಹೈದರಾಬಾದ್‌ನಲ್ಲಿರುವ ನಿವಾಸಕ್ಕೆ ತೆರಳಿದ ಶರ್ಮಿಳಾ, ಪುತ್ರನ ವಿವಾಹ ಪತ್ರಿಕೆಯೊಂದಿಗೆ ಚಂದ್ರಬಾಬು ನಾಯ್ಡು ಅವರನ್ನು ಆಹ್ವಾನಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ನಡುವೆ ಸೌಹಾರ್ದತೆ ಅತ್ಯಗತ್ಯ. ಈ ಆಹ್ವಾನವನ್ನು ರಾಜಕೀಯವಾಗಿ ನೋಡಬಾರದು. ರಾಜಕಾರಣಿಗಳಲ್ಲಿ ರಾಜಕೀಯ ಹೊರತಾಗಿಯೂ ಜೀವನ ಇರುತ್ತದೆ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿರುವೆ. ಈ ಭೇಟಿಗೆ ಯಾವುದೇ ರಾಜಕೀಯ ಬಣ್ಣದ ಅವಶ್ಯಕತೆ ಇಲ್ಲ. ಯಾರು ಸಹ ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಶರ್ಮಿಳಾ ಕೇಳಿಕೊಂಡರು. ಅವರ ಆಹ್ವಾನಕ್ಕೆ ಚಂದ್ರಬಾಬು ನಾಯ್ಡು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಟಿಡಿಪಿ ಮೂಲಗಳು ಖಚಿತಪಡಿಸಿವೆ.
ನವದೆಹಲಿಯಲ್ಲಿ ಜನವರಿ 3 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರ್ಮಿಳಾ ಅವರು ತಮ್ಮ ಪಕ್ಷ ವೈಎಸ್ಆರ್ ತೆಲಂಗಾಣವನ್ನೂ ಕಾಂಗ್ರೆಸ್ನಲ್ಲಿ ವಿಲೀನ ಮಾಡುವ ಮೂಲಕ ಕೈ ಪಕ್ಷಕ್ಕೆ ಸೇರಿದ್ದರು.