ಭೋಪಾಲ್ (ಮಧ್ಯಪ್ರದೇಶ) :ದೇಶದಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಸಮೀಕ್ಷೆ ಎಕ್ಸ್ರೇ ಇದ್ದ ಹಾಗೆ. ಸಮಾಜದಲ್ಲಿ ಯಾವ್ಯಾವ ಸಮುದಾಯ, ಎಷ್ಟೆಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಈ ಎಕ್ಸ್ರೇ ಮಾಡಬೇಕಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದಲ್ಲಿಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಏನೇ ಆದರೂ, ದೇಶದಲ್ಲಿ ಜಾತಿ ಗಣತಿ ನಡೆಸುವಂತೆ ಕೇಂದ್ರವನ್ನು ಕಾಂಗ್ರೆಸ್ ಒತ್ತಾಯಿಸುತ್ತದೆ. ನೀವು ಗಾಯಗೊಂಡಾಗ ಮೊದಲು ಮಾಡುವ ಕೆಲಸವೆಂದರೆ ಅದು ಎಕ್ಸ್ ರೇ. ಎಕ್ಸ್ ರೇ ಮೂಲಕ ಮೂಳೆ ಮುರಿದಿದೆಯೇ ಅಥವಾ ಇಲ್ಲವೇ, ಎಲ್ಲಿ ಮತ್ತು ಹೇಗೆ ಮುರಿದಿದೆ ಎಂದು ನಾವು ಅದರಿಂದ ಖಚಿತಪಡಿಸಿಕೊಳ್ಳುತ್ತೇವೆ. ಅದೇ ರೀತಿ ಜಾತಿ ಗಣತಿಯು ಎಕ್ಸ್ರೇ ರೀತಿ. ಸಮೀಕ್ಷೆ ಎಕ್ಸ್ ಆಗಿದ್ದರೆ, ರೇ ಎಂಬುದು ಎಷ್ಟು ಜನರಿದ್ದಾರೆ ಎಂದು ಸೂಚಿಸುತ್ತದೆ. ಯಾವ ಸಮುದಾಯ, ಎಷ್ಟು ಪ್ರಮಾಣದಲ್ಲಿದೆ . ಅಧಿಕಾರ ರಚನೆಯಲ್ಲಿ ಅವರ ಪಾತ್ರವೇನು ಎಂದು ನಮಗೆ ಅದು ವಿವರಿಸುತ್ತದೆ ಎಂದರು.
ಸಿಡಬ್ಲ್ಯೂಸಿಯಲ್ಲಿ ಅಂಗೀಕಾರ:ಒಬಿಸಿ, ದಲಿತರು ಮತ್ತು ಬುಡಕಟ್ಟು ಜನಾಂಗದವರ ಜೀವನ ಮಟ್ಟಗಳ ಬಗ್ಗೆ ಸತ್ಯ ತಿಳಿಯಲು ಜಾತಿ ಗಣತಿಯೆಂಬ ಎಕ್ಸ್ ರೇ ಮಾಡಬೇಕಿದೆ. ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸಲು ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ ಎಂದು ರಾಹುಲ್ ತಿಳಿಸಿದರು.