ವಯನಾಡು(ಕೇರಳ): ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ನನ್ನನ್ನು ಕೂಡಿಸುವ ಮೂಲಕ ನನ್ನ ನಡವಳಿಕೆಯಲ್ಲಿ ಪ್ರಧಾನಿ ಮೋದಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮೂರು ದಿನಗಳ ಕೇರಳ ಪ್ರವಾಸದಲ್ಲಿರುವ ಅವರು, ಇಂದು ತಮ್ಮ ಸಂಸದೀಯ ಕ್ಷೇತ್ರ ವಯನಾಡಿಗೆ ಭೇಟಿ ನೀಡಿದರು.
ಇದನ್ನೂ ಓದಿ:ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು 'ಭಾಗ್ಯನಗರ': ರಘುಬರ್ ದಾಸ್
ಈ ವೇಳೆ ಮಾತನಾಡಿರುವ ಅವರು, ನನ್ನನ್ನು ಐದು ದಿನಗಳ ಕಾಲ ಕೇಂದ್ರ ಏಜೆನ್ಸಿ ಕಚೇರಿಯಲ್ಲಿ ಕೂರಿಸುವ ಮೂಲಕ ನನ್ನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಾಗಲಿಲ್ಲ. ಹಿಂಸಾಚಾರ, ಬೆದರಿಕೆಗಳಿಂದ ಜನರು ಬದಲಾಗುವುದಿಲ್ಲ. ನನ್ನ ಕಚೇರಿ ಮೇಲೆ ಧ್ವಂಸ ಮಾಡಿಸುವ ಮೂಲಕ ಹಿಂಸಾಚಾರಕ್ಕೆ ಬಿಜೆಪಿ ಪುಷ್ಠಿ ನೀಡುತ್ತಿದೆ ಎಂದರು.
ದೇಶದ ಜನರ ಪ್ರೀತಿಯಿಂದ ನನ್ನ ನಡವಳಿಕೆ ರೂಪುಗೊಂಡಿದೆ. ನನ್ನ ವಿರೋಧಿಗಳು ಅಥವಾ ಶತ್ರುಗಳಿಂದ ಅದನ್ನ ಬದಲಾವಣೆ ಮಾಡಲು ಸಾಧ್ಯವಾಗಲ್ಲ ಎಂದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿಗೆ ನೋಟಿಸ್ ನೀಡಿತ್ತು. ಇದರ ನಂತರ ಐದು ದಿನಗಳ ಕಾಲ ಅವರು ವಿಚಾರಣೆ ಎದುರಿಸಿದ್ದಾರೆ. ಇದೀಗ ಕೇರಳ ಪ್ರವಾಸ ಕೈಗೊಂಡಿದ್ದಾರೆ.