ನವದೆಹಲಿ: ಇಂಧನ ಬೆಲೆಗಳನ್ನು ಏರಿಕೆ ಮಾಡುವ ಮೂಲಕ 7 ವರ್ಷದಲ್ಲಿ ಸುಮಾರು 23 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಗಳಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ತೈಲ ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳ ಏರಿಕೆ ಬೆಲೆ ಏರಿಕೆ ವಿರುದ್ಧ ಕಿಡಿಕಾರಿದ ಅವರು, ಇದರಿಂದ ಬಂಡವಾಳಶಾಹಿಗಳಿಗೆ ಸಹಾಯವಾಗಿದೆ. ಜೊತೆಗೆ ಗ್ಯಾಸ್, ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯನ್ನು ಜಿಡಿಪಿ ಏರಿಕೆ (ಜಿ-ಗ್ಯಾಸ್, ಡಿ-ಡಿಸೇಲ್ ಮತ್ತು ಪಿ-ಪೆಟ್ರೋಲ್) ಎಂದು ಕರೆದಿದ್ದಾರೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಂಡ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಎಲ್ಪಿಜಿ ಬೆಲೆ 410 ರೂಪಾಯಿ ಹೆಚ್ಚಿಸಿದೆ. ಈಗ ಎಲ್ಪಿಜಿ ಬೆಲೆ 885 ರೂಪಾಯಿಗೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಶೇಕಡಾ 42ರಷ್ಟು ಹೆಚ್ಚಾಗಿದೆ. ಡೀಸೆಲ್ ಬೆಲೆ ಶೇಕಡಾ 55ರಷ್ಟು ಏರಿಕೆ ಕಂಡಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ.