ಮಲಪ್ಪುರಂ(ಕೇರಳ):ಸಂಸದೀಯ ಕ್ಷೇತ್ರ ಮಲಪ್ಪುರಂಗೆ ಭೇಟಿ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ವೀರ ಸಾವರ್ಕರ್ ಓದಿದವರಿಗೆ ಭಾರತದ ನಿಜವಾದ ಅರ್ಥ ಗೊತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿಗೆ ಕೇರಳ ಕಾಂಗ್ರೆಸ್ ಆತ್ಮೀಯ ಸ್ವಾಗತ ನೀಡಿತು. ಇದಾದ ಬಳಿಕ ಮಲಪ್ಪುರಂ ತಲುಪಿದ ಅವರು, ಹಿಮಾ ಡಯಾಲಿಸಿಸ್ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
'ಸಾವರ್ಕರ್ ಅವರಂತಹ ಜನರನ್ನು ಓದಿದರೆ ನಿಜವಾದ ಭಾರತ ಅರ್ಥವಾಗಲ್ಲ. ಅವರ ಪ್ರಕಾರ ಭಾರತ ಒಂದು ಭೂಗೋಳ. ಕೈಯಲ್ಲಿ ಪೆನ್ನು ತೆಗೆದುಕೊಂಡು ಅದರಿಂದ ನಕ್ಷೆ ಬಿಡಿಸಿ ಇದು ಭಾರತ ಎಂದು ಹೇಳುತ್ತಾರೆ. ಆದರೆ ನಮಗೆ ಭಾರತವೆಂದರೆ ಇಲ್ಲಿ ವಾಸಿಸುವ ಜನರು. ಭಾರತವು ಜನರ ನಡುವಿನ ಸಂಬಂಧ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್ ಹಾಗು ತಮಿಳು, ಉರ್ದು, ಹಿಂದಿ, ಬಂಗಾಳಿ ಭಾಷಿಕರ ಸಂಬಂಧವಿದೆ' ಎಂದರು.