ನವದೆಹಲಿ : ಮೋದಿ ಉಪನಾಮ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲು ಶಿಕ್ಷೆಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ನೀಡಿತ್ತು. ಈ ಬೆನ್ನಲ್ಲೇ ಲೋಕಸಭೆ ಸದಸ್ಯತ್ವ ಅನರ್ಹತೆ ರದ್ದು ಗೊಳಿಸಿ ಇಂದು ಆದೇಶ ಹೊರಡಿಸಲಾಗಿದೆ.
ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಅವರ ವಿರುದ್ಧ ಸೂರತ್ ಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಕೆಲವೇ ದಿನಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮರಳಿ ನೀಡಲಾಗಿದೆ. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದ ಆದೇಶವನ್ನು ವಾಪಸ್ ಪಡೆಯಲಾಗಿದ್ದು, ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಲೋಕಸಭೆ ಸೆಕ್ರೆಟರಿಯೇಟ್ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯಲ್ಲಿ ಇರುವುದೇನು?:ದಿನಾಂಕ 24ನೇ ಮಾರ್ಚ್, 2023ರಂದು ಸೂರತ್ ಕೋರ್ಟ್ ನೀಡಿದ್ದ ಆದೇಶವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು 04.08.2023 ರಂದು, ವಿಶೇಷ ರಜೆ (Crl.) ಸಂಖ್ಯೆ 8644/2023 ಅನ್ವಯ, ರಾಹುಲ್ ಗಾಂಧಿ ಅವರ ಅಪರಾಧ ನಿರ್ಣಯವನ್ನು ತಡೆ ಹಿಡಿಯುವ ಆದೇಶವನ್ನು ಜಾರಿಗೊಳಿಸಿದೆ. ಭಾರತದ ಸರ್ವೋಚ್ಚ ನ್ಯಾಯಾಲಯ ದಿನಾಂಕ 04.08.2023ರ ರಂದು ಸೂರತ್ ಕೋರ್ಟ್ ಆದೇಶಕ್ಕೆ ತಡೆ ನೀಡಿರುವುದರಿಂದ ರಾಹುಲ್ ಗಾಂಧಿಯವರ ಅನರ್ಹತೆಯನ್ನು ಭಾರತದ ಸಂವಿಧಾನದ 102 (1) (ಇ) ನ ನಿಬಂಧನೆಗಳ ಪ್ರಕಾರ, ಪರಿಚ್ಛೇದ 8 ರಂತೆ 1951 ರ ಜನತಾ ಕಾಯಿದೆ ಅನ್ವಯ ಹಾಗೂ ಮುಂದಿನ ನ್ಯಾಯಾಂಗ ತೀರ್ಪುಗಳಿಗೆ ಒಳಪಟ್ಟು ಅವರ ಅನರ್ಹತೆಯನ್ನು ವಾಪಸ್ ಪಡೆಯಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಲೋಕಸಭೆ ಅವರ ಅನರ್ಹತೆಯನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ ಮಂಗಳವಾರ ನಡೆಯಲಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸ್ಪೀಕರ್ಗೆ ಒತ್ತಾಯಿಸಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಸೂರತ್ ಕೋರ್ಟ್ ಘೋಷಿಸಿತ್ತು. ಅಷ್ಟೇ ಅಲ್ಲ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 23 ರಿಂದ ಜಾರಿಗೆ ಬರುವಂತೆ ಮಾರ್ಚ್ 24 ರಂದು ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಸ್ಪೀಕರ್ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.