ಲಖನೌ(ಉತ್ತರಪ್ರದೇಶ) :ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಲು ಆಗ್ರಾಗೆ ಹೊರಟಿದ್ದ ಪ್ರಿಯಾಂಕಾ ಅವರನ್ನು ತಡೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಕಾರನ್ನು ಲಖನೌ-ಆಗ್ರಾ ಎಕ್ಸ್‌ಪ್ರೆಸ್‌ವೇಯ ಮೊದಲ ಟೋಲ್ ಪ್ಲಾಜಾದಲ್ಲಿ ತಡೆಯಲಾಯಿತು.
₹25 ಲಕ್ಷ ರೂಪಾಯಿ ಕದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ಅರುಣ್ ವಾಲ್ಮೀಕಿ ಎಂಬುವರು ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿ ಮೃತಪಟ್ಟಿದ್ದರು. ಈ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ವಾದ್ರಾ ತೆರಳುತ್ತಿದ್ದರು. ಈ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ವಶಕ್ಕೆ ಪಡೆದ ಕುರಿತಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯೆ ನೀಡಿರುವುದು.. ಈ ತಿಂಗಳ ಆರಂಭದಲ್ಲಿ ಲಖಿಂಪುರ್ ಖೇರಿ ಘಟನೆಯಲ್ಲಿ ಹತ್ಯೆಗೀಡಾದ ರೈತರ ಕುಟುಂಬಗಳಿಗೆ ಭೇಟಿ ನೀಡಲು ಹೊರಟಿದ್ದ ಪ್ರಿಯಾಂಕಾ ಗಾಂಧಿಯವರನ್ನು ತಡೆದು ಬಂಧಿಸಲಾಗಿತ್ತು. ಇದೀಗ ಮೃತ ಆರೋಪಿ ಅರುಣ್ ವಾಲ್ಮೀಕಿ ಅವರ ಕುಟುಂಬವನ್ನು ಭೇಟಿಯಾಗಲು ಹೊರಟಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಮತ್ತೊಮ್ಮೆ ಯುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, "ಅರುಣ್ ವಾಲ್ಮೀಕಿ ಪೊಲೀಸ್ ಕಸ್ಟಡಿಯಲ್ಲಿ ನಿಧನರಾದರು. ಅವರ ಕುಟುಂಬವು ನ್ಯಾಯವನ್ನು ಬಯಸುತ್ತಿದೆ. ನಾನು ಆ ಕುಟುಂಬವನ್ನು ಭೇಟಿ ಮಾಡಲು ಬಯಸುತ್ತೇನೆ. ಯುಪಿ ಸರ್ಕಾರವು ಹೆದರುತ್ತಿದೆಯೇ? ನನ್ನನ್ನು ಏಕೆ ತಡೆಯಲಾಗಿದೆ? ಇಂದು ಭಗವಾನ್ ವಾಲ್ಮೀಕಿ ಜಯಂತಿ. ಬುದ್ಧನ ಬಗ್ಗೆ ಪಿಎಂ ಮೋದಿ ದೊಡ್ಡದಾಗಿ ಮಾತನಾಡಿದರು. ಆದರೆ, ಇದು ಅವರ ಸಂದೇಶದ ಮೇಲೆ ದಾಳಿ ಮಾಡುತ್ತಿದೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಗತ್ಯವಾದ ಅನುಮತಿಗಳಿಲ್ಲದ ಕಾರಣ ಪ್ರಿಯಾಂಕಾ ಗಾಂಧಿ ಅವರನ್ನು ತಡೆಯಲಾಗಿದೆ. ಸೆಕ್ಷನ್ 144 ವಿಧಿಸಲಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸ್ ಲೈನ್‌ಗಳಿಗೆ ಕರೆದೊಯ್ಯಲಾಗುತ್ತಿದೆ. ಇಲ್ಲಿಂದ ಮುಂದೆ ಹೋಗಲು ಅನುಮತಿಸಲಾಗುವುದಿಲ್ಲ ಎಂದು ಯುಪಿ ಪೊಲೀಸರು ಹೇಳಿದ್ದಾರೆ.