ನವದೆಹಲಿ: ಹಲವು ರಾಜಕೀಯ ಆಯಾಮಗಳ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ತೀವ್ರ ವಿಷಾದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಪಕ್ಷದ ನಾಯಕತ್ವ ಕಾರ್ಯನಿರ್ವಹಿಸುತ್ತಿರುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಜಿ-23 ಸಮಿತಿಯಲ್ಲಿ ಗುಲಾಂ ನಬಿ ಆಜಾದ್ ಸಹ ಇದ್ದರು. ಅವರನ್ನು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನೇಮಕಾತಿ ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಇತ್ತೀಚೆಗೆ ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ನೀಡಿದ್ದರು. ಈಗ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ. ಅಲ್ಲದೇ ರಾಹುಲ್ ಗಾಂಧಿಯವರ ವರ್ತನೆ ಚಿಕ್ಕ ಮಕ್ಕಳಂತೆ ಇದೆ. ಸ್ವಪಕ್ಷದಲ್ಲಿಯೇ ತಮ್ಮನ್ನು ಮೂಲೆಗುಂಪು ಮಾಡಿರುವ ಭಾವನೆ ತಮಗೆ ವ್ಯಕ್ತವಾಗಿದೆ ಎಂದು ಸೋನಿಯಾ ಗಾಂಧಿಗೆ ಸಲ್ಲಿಸಿರುವ ಸುಮಾರು ನಾಲ್ಕು ಪುಟಗಳುಳ್ಳ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ ಉಲ್ಲೇಖಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದು ಅತಿದೊಡ್ಡ ಆಘಾತವಾಗಿದೆ. ಈ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವ ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ 39 ವರ್ಷದ ಜೈವೀರ್ ಶೆರ್ಗಿಲ್ ಅವರು ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ನ ಅತ್ಯಂತ ಕಿರಿಯ ಮತ್ತು ಪ್ರಮುಖ ವಕ್ತಾರರಲ್ಲಿ ಇವರು ಒಬ್ಬರಾಗಿದ್ದರು.
ಇದನ್ನು ಓದಿ:ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮಿತಿ ಹೆಚ್ಚಿಸಿದ ಸುಪ್ರೀಂಕೋರ್ಟ್