ನವದೆಹಲಿ:ಚುನಾವಣಾ ತಂತ್ರಜ್ಞ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಚುನಾವಣಾ ಸಲಹೆಗಾರ ಪ್ರಶಾಂತ್ ಕಿಶೋರ್ ವಿರುದ್ಧ ತಮಿಳುನಾಡು, ಗೋವಾ, ಪುದುಚೇರಿಯ ಕಾಂಗ್ರೆಸ್ ಉಸ್ತುವಾರಿಯಾದ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಶಕಗಳ ನಂತರ ಬಿಜೆಪಿ ಇರುವುದಿಲ್ಲ ಎಂದು ಯಾರು ಹೇಳಿದರು?, ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪಕ್ಷಗಳೂ ಅಸ್ತಿತ್ವದಲ್ಲಿರುತ್ತವೆ. ಕಾಂಗ್ರೆಸ್ ಅನ್ನು ಕೊನೆಗೊಳಿಸಲು ಬಿಜೆಪಿ ಮಾತ್ರ ಬಯಸುತ್ತದೆ. ಪ್ರಶಾಂತ್ ಕಿಶೋರ್ ಅವರಂತಹ ಕೆಲವರು ಕನಸು ಕಾಣುತ್ತಾರೆ. ಕಾಂಗ್ರೆಸ್ ಎಲ್ಲಿಯೂ ಹೋಗುವುದಿಲ್ಲ ಎಂಬುದು ಅವರಿಗೆ ತಿಳಿದಿಲ್ಲ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಬುಧವಾರವಷ್ಟೇ ಗೋವಾದಲ್ಲಿ ಮಾತನಾಡಿದ್ದ ಪ್ರಶಾಂತ್ ಕಿಶೋರ್ ಬಿಜೆಪಿಯ ವಿರುದ್ಧ ಕೆಲವು ವರ್ಗಗಳು ಕೋಪಗೊಂಡಿವೆ ಎಂದ ಮಾತ್ರಕ್ಕೆ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಭಾವಿಸುವುದು ತಪ್ಪು. ಬಿಜೆಪಿ ಇಲ್ಲಿಯೇ ಉಳಿಯುತ್ತದೆ. ದಶಕಗಳ ತನಕ ಬಿಜೆಪಿ ಇಲ್ಲಿಯೇ ರಾಜಕೀಯದ ಕೇಂದ್ರಬಿಂದುವಾಗಲಿದೆ. ಇದನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ದಿನೇಶ್ ತಿರುಗೇಟು ನೀಡಿದ್ದಾರೆ.
ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಕೂಡಾ ಸ್ಪರ್ಧಿಸಲು ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೋವಾದಲ್ಲಿ ಗುರುವಾರದಿಂದ ಮೂರು ದಿನಗಳ ಪ್ರವಾಸ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯವರ ಚುನಾವಣಾ ಸಲಹೆಗಾರ ಪ್ರಶಾಂತ್ ಕಿಶೋರ್ ಕೂಡಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಇದನ್ನೂ ಓದಿ:ನಟ ಪುನೀತ್ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು: ಖಾಸಗಿ ಆಸ್ಪತ್ರೆಗೆ ದಾಖಲು