ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ವಿ.ಮುರಳೀಧರನ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.
ಗುಜರಾತ್ ಗಲಭೆ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ವಿಷಯವಾಗಿ ಕಾಂಗ್ರೆಸ್ನೊಂದಿಗೆ ಅನಿಲ್ ಆ್ಯಂಟನಿ ಭಿನ್ನಾಭಿಪ್ರಾಯ ಹೊಂದಿದ್ದರು. ಅಲ್ಲದೇ, ಪಕ್ಷದ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಕೇರಳ ಕಾಂಗ್ರೆಸ್ನ ಡಿಜಿಟಲ್ ಮೀಡಿಯಾ ಸಂಚಾಲಕ, ಎಐಸಿಸಿ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಮ್ಯುನಿಕೇಷನ್ ಸೆಲ್ನ ರಾಷ್ಟ್ರೀಯ ಸಂಯೋಜಕರ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ಎರಡು ತಿಂಗಳ ಹಿಂದೆ ಪಕ್ಷ ತೊರೆದಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, "ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವ ಸಾಕ್ಷ್ಯಚಿತ್ರ ಬೆಂಬಲಿಸದೇ ಇದ್ದುದಕ್ಕಾಗಿ ಪಕ್ಷದಲ್ಲೇ ಟೀಕೆಗೆ ಗುರಿಯಾಗಿದ್ದೇನೆ. ನನಗೆ ಹಲವಾರು ನಿಂದನಾತ್ಮಕ ಕರೆಗಳು ಬಂದಿವೆ. ನಾನು ಎಲ್ಲಿಯೇ ಇದ್ದರೂ ಜೀವನ ಮುಂದುವರಿಯುತ್ತದೆ. ಕಾಂಗ್ರೆಸ್ನ ಎಲ್ಲ ಜವಾಬ್ದಾರಿಗಳಿಗೆ ನಾನು ರಾಜೀನಾಮೆ ನೀಡಿದ್ದೇನೆ" ಎಂದು ಹೇಳಿದ್ದರು. ಅಲ್ಲದೇ, ಕೆಲವು ದಿನಗಳ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ವಿ.ಬಿ.ಶ್ರೀನಿವಾಸ್ ಹೇಳಿಕೆಯನ್ನು ಅನಿಲ್ ಆ್ಯಂಟನಿ ಖಂಡಿಸಿದ್ದರು.
ಎಲ್ಲ ಬೆಳೆವಣಿಗೆಗಳ ನಂತರ ಇದೀಗ ಕೇಂದ್ರದ ಆಡಳಿತಾರೂಢ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಚಿವ ಪಿಯೂಷ್ ಗೋಯಲ್ ಪಕ್ಷದ ಬಾವುಟ ನೀಡಿ ಆ್ಯಂಟನಿ ಅವರನ್ನು ಬರಮಾಡಿಕೊಂಡರು. ಪಕ್ಷದ ಕೇರಳದ ನಾಯಕರಾದ ಕೇಂದ್ರ ಸಚಿವ ವಿ.ಮುರಳೀಧರನ್, ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಅನಿಲ್, "ಅನೇಕ ಕಾಂಗ್ರೆಸ್ ನಾಯಕರು ತಮ್ಮ ಕರ್ತವ್ಯ ನಿರ್ದಿಷ್ಟ ಕುಟುಂಬಕ್ಕಾಗಿ ಕೆಲಸ ಮಾಡುವುದೆಂದೇ ಭಾವಿಸಿದ್ದಾರೆ. ಆದರೆ ಜನರಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದು ನಾನು ನಂಬುತ್ತೇನೆ. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸ್ಪಷ್ಟ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ" ಎಂದು ಹೇಳಿದರು.