ಗುರುಗ್ರಾಮ್ (ಹರಿಯಾಣ): ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೊರೊನಾ ಹಿನ್ನೆಲೆ ಗುರುಗ್ರಾಮ್ನ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ 71 ವರ್ಷ ವಯಸ್ಸಿನ ರಾಜ್ಯಸಭೆ ಸದಸ್ಯ ಅಹ್ಮದ್ ಪಟೇಲ್ ಕೊನೆಯುಸಿರೆಳೆದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ವಿಧಿವಶ - ಅಹ್ಮದ್ ಪಟೇಲ್ ವಿದಿವಶ
06:12 November 25
ಕೊರೊನಾಗೆ ತುತ್ತಾಗಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಇಂದು ಕೊನೆಯುಸಿರೆಳೆದಿದ್ದಾರೆ.
ಇದೀಗ ಬಹು ಅಂಗಾಂಗ ವೈಫಲ್ಯದ ಕಾರಣದಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಫೈಸಲ್ ದೃಢಪಡಿಸಿದ್ದಾರೆ. ತಂದೆಯ ಅಗಲಿಕೆ ಕುರಿತಂತೆ ಟ್ವೀಟ್ ಮಾಡಿರುವ ಅವರು, ನಮ್ಮ ತಂದೆ ಶ್ರೀ ಅಹ್ಮದ್ ಪಟೇಲ್ ಅಕಾಲಿಕ ಮರಣ ಹೊಂದಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇನೆ. 25/11/20ರ ನಸುಕಿನಜಾವ 3:30ರ ಸುಮಾರಿಗೆ ನಮ್ಮ ತಂದೆ ಇಹಲೋಕ ತ್ಯಜಿಸಿದ್ದಾರೆ. ಒಂದು ತಿಂಗಳ ಹಿಂದೆ ಅವರಿಗೆ ಕೊರೊನಾ ದೃಢವಾಗಿತ್ತು. ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಅಲ್ಲಾನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಹಿರಿಯ ನಾಯಕರಾಗಿ ಪಕ್ಷಕ್ಕೆ ದುಡಿದಿದ್ದರು. ಅವರಿಗೆ ಅಕ್ಟೋಬರ್ 1ರಂದು ಕೋವಿಡ್ ದೃಢವಾಗಿ ಬಳಿಕ ನವೆಂಬರ್ 15ರಂದು ಗುರುಗ್ರಾಮ್ನ ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಅಹ್ಮದ್ ಪಟೇಲ್ ಸೋನಿಯಾ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದರು.