ನವದೆಹಲಿ :ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆ ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ 'ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಸಂಬಂಧಿಸಿದ ಪರಿಕಲ್ಪನೆಯನ್ನು ಪರಿಶೀಲಿಸಲು ಮತ್ತು ಶೀಘ್ರವಾಗಿ ಶಿಫಾರಸುಗಳನ್ನು ಮಾಡಲು 8 ಸದಸ್ಯರ ಉನ್ನತ ಮಟ್ಟದ ಸಮಿತಿಗೆ ಸರ್ಕಾರ ನಿನ್ನೆ (ಶನಿವಾರ) ಸೂಚನೆ ನೀಡಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದು, ಗೃಹ ಸಚಿವ ಅಮಿತ್ ಶಾ, ಲೋಕಸಭೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಮತ್ತು ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಸದಸ್ಯರಾಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಅಧಿರ್ ರಂಜನ್ ಚೌಧರಿ ಸಮಿತಿಯ ಸದಸ್ಯನಾಗಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಉನ್ನತ ಮಟ್ಟದ ಸಮಿತಿಯಲ್ಲಿ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ.ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಕೂಡ ಸದಸ್ಯರಾಗಿದ್ದಾರೆ. ಸಮಿತಿಯ ಸಭೆಗಳಲ್ಲಿ ವಿಶೇಷ ಆಹ್ವಾನಿತರಾಗಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಭಾಗವಹಿಸಲಿದ್ದು, ಕಾನೂನು ವ್ಯವಹಾರಗಳ ಕಾರ್ಯದರ್ಶಿ ನಿತೇನ್ ಚಂದ್ರ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ. ಈ ಸಮಿತಿಯು ವರದಿಯನ್ನು ಸಲ್ಲಿಸಲು ಯಾವುದೇ ಕಾಲದ ಮಿತಿಯನ್ನು ನಿರ್ದಿಷ್ಟಪಡಿಸದೇ ಇದ್ದರೂ, ತಕ್ಷಣವೇ ಕೆಲಸ ಪ್ರಾರಂಭಿಸುತ್ತದೆ ಮತ್ತು ಆದಷ್ಟು ಬೇಗ ಶಿಫಾರಸುಗಳನ್ನು ಮಾಡುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೀಗಾಗಿ, ಈ ಬಾರಿಯ ಸೆಪ್ಟೆಂಬರ್ 18-22ರ ನಡುವೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಒಂದು ದೇಶ ಒಂದು ಚುನಾವಣೆ ವಿಧೇಯಕ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.