ನವದೆಹಲಿ:ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಗೆ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಇಲ್ಲಿನ ಜಂತರ್ ಮಂತರ್‌ನಲ್ಲಿ ‘ಸತ್ಯಾಗ್ರಹ’ ಆರಂಭಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್, ಅಗ್ನಿಪಥ್ ಯೋಜನೆಯು ದೇಶದ ಯುವಜನರಿಗೆ ಪ್ರಯೋಜನಕಾರಿಯಲ್ಲ. ಯೋಜನೆಯನ್ನು ಶೀಘ್ರವೇ ಹಿಂಪಡೆಯಬೇಕು. ಇದು ರಾಷ್ಟ್ರೀಯ ಭದ್ರತೆಗೂ ಅಪಾಯವನ್ನುಂಟು ಮಾಡುತ್ತದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಮುಖಂಡರಾದ ಜೈ ರಾಮ್ ರಮೇಶ್, ರಾಜೀವ್ ಶುಕ್ಲಾ, ಸಚಿನ್ ಪೈಲಟ್, ಸಲ್ಮಾನ್ ಖುರ್ಷಿದ್ ಮತ್ತು ಅಲ್ಕಾ ಲಾಂಬಾ ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.
ದೇಶಾದ್ಯಂತ ಪ್ರತಿಭಟನಾನಿರತ ಯುವಕರು ಹಿಂಸಾಚಾರಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದ ಕಾಂಗ್ರೆಸ್ ನಾಯಕರು, ಯೋಜನೆಯನ್ನು ವಿರೋಧಿಸಿ ಪ್ರತಿಭಟಿಸುವುದು ನಮ್ಮ ಹಕ್ಕು. ಆದರೆ, ಅದನ್ನು ಶಾಂತಿಯುತವಾಗಿ ನಡೆಸಬೇಕು, ಹಿಂಸಾಚಾರ ಬೇಡ ಎಂದು ಕೋರಿದರು.
ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಕಾರಣ, ಸ್ಥಳದಲ್ಲಿ ಭಾರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜಂತರ್ ಮಂತರ್‌ಗೆ ಪ್ರವೇಶಿಸುವ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಬಂಧಿಸಲಾಗಿದೆ.
ವಿವಾದಿತ ರಕ್ಷಣಾ ನೇಮಕಾತಿ ಯೋಜನೆಯ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ, ಪ್ರತಿಭಟನಾಕಾರರು ರೈಲು ನಿಲ್ದಾಣಗಳನ್ನು ಧ್ವಂಸಗೊಳಿಸುವುದು, ರೈಲುಗಳಿಗೆ ಬೆಂಕಿ ಹಚ್ಚುವುದು ಮತ್ತು ರಸ್ತೆಗಳು ಮತ್ತು ರೈಲು ಹಳಿಗಳನ್ನು ನಿರ್ಬಂಧಿಸುವ ಘಟನೆಗಳು ವರದಿಯಾಗಿವೆ.
ಓದಿ:ವಿಡಿಯೋ: ದೆಹಲಿಯ ಐಟಿಪಿಒ ಸುರಂಗದಲ್ಲಿ ಕಸ ಎತ್ತಿದ ಪ್ರಧಾನಿ ಮೋದಿ