ಹೈದರಾಬಾದ್:ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ಇತ್ತೀಚಿನ ವರದಿಗಳಂತೆ 66 ಸ್ಥಾನಗಳಲ್ಲಿ ಕಾಂಗ್ರೆಸ್ ಮುಂದಿದ್ದು, ಅಧಿಕಾರದ ಗದ್ದುಗೆ ಹಿಡಿಯುವತ್ತ ಮುನ್ನುಗ್ಗುತ್ತಿದೆ. ಆದರೆ ತನ್ನ ಪಕ್ಷದ ಶಾಸಕರನ್ನು ಯಾರೂ ಸೆಳೆಯದಂತೆ ಇದೀಗ ಶಾಸಕರನ್ನು ಸ್ಥಳಾಂತರಗೊಳಿಸಲು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಬಸ್‌ಗಳನ್ನು ಸಿದ್ಧಪಡಿಸಿದೆ. ಹೈದರಾಬಾದ್‌ನ ತಾರಾ ಹೋಟೆಲ್‌ನಲ್ಲಿ ಈಗಾಗಲೇ ಬಸ್‌ಗಳನ್ನು ರೆಡಿಯಾಗಿ ಇರಿಸಿಕೊಂಡಿದೆ.
ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಷ್ಟೇ ಅಲ್ಲದೇ, ಪಕ್ಷದ ವೀಕ್ಷಕರು ಮತ ಎಣಿಕೆಯ ಮೇಲೆ ನಿಗಾವಹಿಸಿದ್ದು, ಪಕ್ಷದ ನಾಯಕರಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿರುವ ಕಾರಣ ಯಾರೂ ಪಕ್ಷಾಂತರಗೊಳ್ಳುವುದಿಲ್ಲ ಎಂದು ತಿಳಿಸಿದರು.