ನವದೆಹಲಿ : ರಾಹುಲ್ ಗಾಂಧಿ ಅವರನ್ನೇ ಕಾಂಗ್ರೆಸ್ ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಹುದ್ದೆಯ ಬಗೆಗಾಗಲೀ ಅಥವಾ ಅಧಿಕಾರದ ಬಗೆಗಾಗಲೀ ಕಾಂಗ್ರೆಸ್‌ಗೆ ಯಾವುದೇ ಆಸಕ್ತಿ ಇಲ್ಲ ಎಂದಿದ್ದಾರೆ.
“ಕಾಂಗ್ರೆಸ್‌ಗೆ ಅಧಿಕಾರ ಅಥವಾ ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತಿ ಇಲ್ಲ ಎಂದು ಎಂಕೆ ಸ್ಟಾಲಿನ್ ಅವರ ಜನ್ಮದಿನದಂದು ನಾನು ಈಗಾಗಲೇ ಚೆನ್ನೈನಲ್ಲಿ ಹೇಳಿದ್ದೆ. ಇಂದಿನ ಸಭೆಯಲ್ಲಿ ನಮ್ಮ ಉದ್ದೇಶ ನಮಗಾಗಿ ಅಧಿಕಾರ ಗಳಿಸುವುದಲ್ಲ. ಇದು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸಲು ನಡೆದಿರುವ ಸಭೆ" ಎಂದು ಪ್ರತಿಪಕ್ಷಗಳ ಸಭೆಯಲ್ಲಿ ಖರ್ಗೆ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆಯನ್ನು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ವೇದಿಕೆಯಾಗಿ ಬಳಸಿಕೊಂಡ ಅವರು, ಬಿಜೆಪಿಯವರು ಹಳೆಯ ಮಿತ್ರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯದಿಂದ ರಾಜ್ಯಕ್ಕೆ ಓಡುತ್ತಿದ್ದಾರೆ ಎಂದರು. ನಾವು 26 ಪಕ್ಷಗಳು, 11 ರಾಜ್ಯಗಳಲ್ಲಿ ಸರ್ಕಾರ ಹೊಂದಿದ್ದೇವೆ. ಬಿಜೆಪಿ ತಾನು ಏಕೈಕವಾಗಿ 303 ಸ್ಥಾನಗಳನ್ನು ಪಡೆದಿಲ್ಲ. ಮಿತ್ರಪಕ್ಷಗಳ ಮತಗಳನ್ನು ಬಳಸಿ ನಂತರ ಅವುಗಳನ್ನು ತಿರಸ್ಕರಿಸಿದೆ" ಎಂದು ಅವರು ಸಭೆಯಲ್ಲಿ ಹೇಳಿದರು.
ಬೆಂಗಳೂರಿನಲ್ಲಿ ಜಮಾಯಿಸಿರುವ ಪ್ರತಿಪಕ್ಷಗಳ ಮುಖಂಡರು ಸೋಮವಾರ ಸಂಜೆ ಭೋಜನ ಸಭೆ ನಡೆಸಿ ಮಂಗಳವಾರ ನಡೆಯಬೇಕಿರುವ ಗುಪ್ತ ಮಾತುಕತೆಯ ಕಾರ್ಯಸೂಚಿಗೆ ಒಮ್ಮತಕ್ಕೆ ಬಂದರು. ಪ್ರತಿಪಕ್ಷಗಳ ಒಕ್ಕೂಟಕ್ಕೆ ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರನ್ನು ಮುಂಚೂಣಿಯ ಅಧ್ಯಕ್ಷರನ್ನಾಗಿ ಮತ್ತು ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.